ಲಾಹೋರ್: ಪಾಕಿಸ್ಥಾನದ ಆಲ್ರೌಂಡರ್ ಇಮಾದ್ ವಾಸಿಮ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ತಮ್ಮ ನಿರ್ಧಾರವನ್ನು ಅವರು ಎಕ್ಸ್ನಲ್ಲಿ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಸಾಕಷ್ಟು ಯೋಚನೆ ಮಾಡಿ ಅಂತಿಮವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ.
ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಗೆ ಇದೇ ಸರಿಯಾದ ಸಮಯ. ಕಳೆದ ಅನೇಕ ವರ್ಷಗಳಿಂದ ನನಗೆ ಪ್ರೋತ್ಸಾಹ ನೀಡುತ್ತಲೇ ಬಂದ ಪಿಸಿಬಿಗೆ, ಪಾಕಿಸ್ಥಾನದ ಕ್ರಿಕೆಟ್ ಅಭಿ ಮಾನಿಗಳಿಗೆ ಕೃತಜ್ಞತೆಗಳು. ನನ್ನ ಕುಟುಂಬದವರಿಗೆ, ಸ್ನೇಹಿತರಿಗೆ ಧನ್ಯವಾದಗಳು. ಪಾಕಿಸ್ಥಾನವನ್ನು ಪ್ರತಿನಿಧಿಸಿದ್ದು ನನ್ನ ಪಾಲಿನ ಹೆಮ್ಮೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದಾ ಚೆಯ ವೃತ್ತಿ ಬದುಕನ್ನು ನಾನಿನ್ನು ಅರಸಿಕೊಳ್ಳಬೇಕಿದೆ ಎಂಬುದಾಗಿ ಇಮಾದ್ ವಾಸಿಮ್ ಹೇಳಿದರು.
ಎಡಗೈ ಬ್ಯಾಟರ್ ಹಾಗೂ ಸ್ಪಿನ್ ಬೌಲರ್ ಆಗಿದ್ದ ಇಮಾದ್ ವಾಸಿಮ್ ಪಾಕಿಸ್ಥಾನ ಪರ 55 ಏಕದಿನ ಹಾಗೂ 66 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 986 ಮತ್ತು 486 ರನ್ ಮಾಡಿದ್ದಾರೆ. ಉರುಳಿಸಿದ ವಿಕೆಟ್ಗಳ ಸಂಖ್ಯೆ 109 (44 ಮತ್ತು 65). ಈ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರಾವಲ್ಪಿಂಡಿಯಲ್ಲಿ ಕೊನೆಯ ಟಿ20 ಪಂದ್ಯ ಆಡಿದ್ದರು. ಇಮಾದ್ 2017ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಸದಸ್ಯನಾಗಿದ್ದರು.