ಗುಂಡ್ಲುಪೇಟೆ: ತಾಲ್ಲೂಕಿನ ಯಡವನಹಳ್ಳಿ ಗ್ರಾಮದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಬಂಡೀಪುರ ಅರಣ್ಯ ವ್ಯಾಪ್ತಿಯ ಓಂಕಾರ ಅರಣ್ಯ ವಲಯದಲ್ಲಿ ನಡೆದಿದೆ.
ಯಡವನಹಳ್ಳಿ ಗ್ರಾಮದ ರೈತ ಮಹದೇವನಾಯಕ (55) ಎಂಬುವವರು ಗಾಯಗೊಂಡವರಾಗಿದ್ದು, ಇವರು ಬೆಳಿಗ್ಗೆ ಸುಮಾರು 11.30 ರ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹುಲಿ ಏಕಾಏಕಿ ದಾಳಿ ನಡೆಸಿ, ಭುಜ, ಮುಖ ಹಾಗೂ ಕಾಲಿಗೆ ಪರಚಿ ಗಾಯಗೊಳಿಸಿದೆ. ಹುಲಿ ದಾಳಿಗೆ ಒಳಗಾದ ರೈತ ಕಿರುಚಿಕೊಂಡ ಶಬ್ದಕ್ಕೆ ಹುಲಿ ಪರಾರಿಯಾಗಿದೆ.
ಅಷ್ಟರಲ್ಲಿ ಅಕ್ಕಪಕ್ಕದ ಜಮೀನಿನವರು ಬಂದು ಗಾಯಾಳುವನ್ನು ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಮಾಹಿತಿ ಅರಿತ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗೆ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದಾರೆ.