ಕನಕಪುರ: ಕಾಡಾನೆ ದಾಳಿಗೆ ಅಮಾಯಕ ಬಡ ರೈತ ನೊಬ್ಬ ಸಾವನ್ನಪ್ಪಿರುವ ಧಾರುಣ ಘಟನೆ ತಾಲ್ಲೂಕಿನ ಬನ್ನಿಮ್ಮುಕ್ಕೊಡ್ಲು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯ ಬನ್ನಿಮುಕ್ಕೊಡ್ಲು ಗ್ರಾಮದ ರಾಮಚಂದ್ರಯ್ಯ ಚಂದ್ರಣ್ಣ (55) ಮೃತಪಟ್ಟ ರೈತ ಎಂದು ತಿಳಿದುಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಗಂಡ ಹೆಂಡತಿ ಇಬ್ಬರೂ ದನ ಕುರಿಗಳನ್ನು ಮೇಯಿಸಲು ಹೋಗಿ ಸಾಯಂಕಾಲ ದನ ಕುರಿಗಳ ಜೊತೆ ಮನೆಗೆ ಬಂದಾಗ ಒಂದು ಕುರಿ ಕಾಣೆ ಯಾಗಿದ್ದು ಅದನ್ನು ನೋಡಿಕೊಂಡು ಬರುವುದಾಗಿ ತನ್ನ ಹೆಂಡತಿ ಭೈರಮ್ಮಗೆ ತಿಳಿಸಿ ಹೋಗಿದ್ದು ರಾತ್ರಿಯಾದರೂ ತನ್ನ ಗಂಡ ಮನೆಗೆ ಬಾರದಿದ್ದಾಗ ಅಕ್ಕಪಕ್ಕದ ಮನೆ ಯವರ ಸಹಾಯದಿಂದ ಹುಡುಕಾಡಿದಾಗ ಮೂರು ದಿನಗಳ ನಂತರ ಗುರಿಕಾರ್ ದೊಡ್ಡಿಯ ರುದ್ರೇಗೌಡರ ಜಮೀನಿನ ಬಳಿ ಆನೆ ದಾಳಿಗೆ ಬಲಿಯಾಗಿರುವುದು ಕಂಡು ಬಂದಿದೆ.
ವಿಷಯ ತಿಳಿದ ಕೂಡಲೇ ಕೋಡಿಹಳ್ಳಿ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರವಿಕುಮಾರ್,ಮುಗ್ಗೂರು ವಲಯ ಅರಣ್ಯಾಧಿಕಾರಿ ರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದು, ಶವ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಗ್ರಾಮಸ್ಥರ ಆಕ್ರೋಶ:ಡಿ.ಲಿಂಗೇಗೌಡರ ತೋಟದ ಬಳಿ ನಿರ್ಮಿಸಿರುವ ಚೆಕ್ ಡ್ಯಾಂ ನಲ್ಲಿ ನೀರು ಸಂಗ್ರಹವಾಗಿದ್ದು ಅಲ್ಲಿ ನೀರು ಕುಡಿಯಲು ಕಾಡು ಪ್ರಾಣಿಗಳು ಬರುತ್ತಿವೆ ಕಾಡಾನೆಗಳು ಅಲ್ಲೇ ಬೀಡು ಬಿಟ್ಟಿರುವುದರಿಂದ ಕೋಡಿಹಳ್ಳಿಯಿಂದ ನಮ್ಮ ಸುತ್ತ ಮುತ್ತಲೂ ಗ್ರಾಮಗಳಿಗೆ ಓಡಾಡಲು ಜೀವ ಕೈಯಲ್ಲಿಡಿದು ಓಡಾಡಬೇಕಾದ ವಾತಾವರಣ ನಿರ್ಮಾಣವಾಗಿದೆ,ಆದ್ದರಿಂದ ಆನೆಗಳ ಹಾವಳಿಯನ್ನು ಕೂಡಲೇ ತಪ್ಪಿಸಬೇಕೆಂದು ಗ್ರಾಮದ ಮುಖಂಡ ನಾಗರಾಜು ಆಗ್ರಹಿಸಿದ್ದಾರೆ.
ಸತ್ತವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಅವರ ಕುಟುಂಬಕ್ಕೆ ಆಧಾರವಾಗಿ ಸರ್ಕಾರಿ ನೌಕರಿ ಕೊಡಬೇಕೆಂದು ಅವರು ಓತ್ತಾಯಿಸಿ ಮುಂದಿನ ದಿನಗಳಲ್ಲಿ ಕಾಡಾನೆಗಳ ಹಾವಳಿಯನ್ನ ನಿಯಂತ್ರಿಸದಿದ್ದರೆ ಅರಣ್ಯಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರೆಲ್ಲಾ ಸೇರಿ ಧರಣಿ ಮಾಡಲಾಗುವುದು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.