ದೊಡ್ಡಬಳ್ಳಾಪುರ: ಸಹಕಾರಿ ಸಂಸ್ಥೆಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನು ಸರ್ಕಾರ ಕೂಡಲೇ ಮನ್ನಾ ಮಾಡಬೇಕು. 2025ರವರೆಗೆ ಎಲ್ಲ ರೀತಿಯ ಸಾಲಗಳ ಮೇಲಿನ ಬಡ್ಡಿ ಕೂಡ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಚುಂಚೇಗೌಡರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಇಂದು ರೈತರ ಬಹುತೇಕ ಜಮೀನುಗಳು ರಿಯಲ್ ಎಸ್ಟೇಟ್ ದಂಧೆಯ ಕಪಿ ಮುಷ್ಟಿಯಲ್ಲಿದೆ. ಬರ ಪರಿಸ್ಥಿತಿಯಲ್ಲಿ ರೈತರು ಸಾಲ ತೀರಿಸುವುದು ದುಸ್ತರವಾಗಿದೆ. ರೈತರಿಗೆ ಹೈನುಗಾರಿಕೆಇಲ್ಲದೇ ಹೋಗಿದ್ದರೆ ಅವರ ಬದುಕನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ.
ಮಾಜಿ ಶಾಸಕ ಎಂ.ವಿ.ಕೃಷ್ಣಪ್ಪ ಅವರು ಹೈಬ್ರಿಡ್ ತಳಿ ಪರಿಚಯಿಸಿದ ಬಳಿಕ ಹೈನೋದ್ಯಮ ರೈತರಿಗೆ ಆಸರೆಯಾಗಿದೆ ಎಂದು ಹೇಳಿದರು.ಈ ಭಾಗದ ಪ್ರಭಾವಿ ನಾಯಕ ಆರ್.ಎಲ್. ಜಾಲಪ್ಪ ಅವರು ಸಹಕಾರಿ ಸಚಿವರಾಗಿದ್ದರು. ಅವರೇ ತರಕಾರಿ ಮಾರುಕಟ್ಟೆಯನ್ನು ಸರ್ಕಾರಿ ವ್ಯವಸ್ಥೆಗೆ ತಂದರು. ದೇಶದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರು ಅವರು ಪಂಚವಾರ್ಷಿಕ ಯೊಜನೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಮನ್ನಣೆ ಕೊಟ್ಟ ಕಾರಣದಿಂದಲೇ ಸಹಕಾರಿ ಕ್ಷೇತ್ರವು ದೇಶದ ಆರ್ಥಿಕತೆಯ ಹೆಬ್ಬಾಗಿಲಾಯಿತು ಎಂದು ಅಭಿಪ್ರಾಯಪಟ್ಟರು.
ಮಹಾತ್ಮ ಗಾಂಧಿಯವರ ಕನಸಿನ ರಾಮರಾಜ್ಯ ಪರಿಕಲ್ಪನೆ ಸಾಕಾರವಾಗಬೇಕಾದರೆ ಪ್ರತಿ ಹಳ್ಳಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಶಾಲೆ, ಸಹಕಾರಿ ಸಂಘ ಹಾಗೂ ಗ್ರಾಮ ಪಂಚಾಯಿತಿ ಅತ್ಯವಶ್ಯಕ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಆದರೆ, 2025 ರವರೆಗೆ ಸಹಕಾರಿ ಸಂಘಗಳಲ್ಲಿ ರೈತರು ಪಡೆದ ಅಲ್ಪಾವಧಿ, ದೀರ್ಘಾವಧಿ ಸಾಲದ ಮೇಲಿನ ಸಂಪೂರ್ಣ ಬಡ್ಡಿ ಮನ್ನಾ ಮಾಡಬೇಕು ಎಂದು ಪುನರುಚ್ಚರಿಸಿದರು.
ಮಾಜಿ ಸಿಎಂ ವೀರಪ್ಪ ಮೊಯಿಲಿ ಮಾತನಾಡಿ, ಎಲ್ಲ ಸಹಕಾರಿಗಳಿಗೆ ಅಭಿನಂದನೆ ಮಾಡುವ ಮೂಲಕ ಇಲ್ಲಿ ನಿಜವಾದ ಸಹಕಾರಿ ತತ್ವ ಅನುಷ್ಠಾನಗೊಂಡಿದೆ. ಎರಡು ವರ್ಷದಲ್ಲಿ ಎತ್ತಿನಹೊಳೆ ನೀರು ಮನೆ ಬಾಗಿಲಿಗೆ ಬರಲಿದೆ. ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ದೇವನಹಳ್ಳಿಯ ಕೆಲ ಭಾಗಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ವೃಷಭಾವತಿ ನೀರು ಹರಿಸಲಾಗುವುದು. ಈಗಾಗಲೇ ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಹಣ ಬಿಡುಗಡೆ ಮಾಡಿದೆ. ಚುಂಚೇಗೌಡರ ಸಾರಥ್ಯದಲ್ಲಿ ಸಹಕಾರ ಚಳವಳಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿ ಎಂದು ಹೇಳಿದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅವರು, ಸಹಕಾರಿ ಕ್ಷೇತ್ರದಲ್ಲಿ ಚುಂಚೇಗೌಡರ ಸಾಧನೆ, ಸೇವೆಯನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ವಿ.ಕೃಷ್ಣಪ್ಪ, ಮುಖಂಡರಾದ ನಾಗರಾಜ, ಕೇಶವಮೂರ್ತಿ, ಮಾರೇಗೌಡ, ದಯಾನಂದ ಸ್ವಾಮಿ,ಸಿ.ಡಿ.ಸತ್ಯನಾರಾಯಣಗೌಡ, ಅಪ್ಪಯಣ್ಣ, ಲಕ್ಷ್ಮಿಪತಿ, ಎ.ನರಸಿಂಹಯ್ಯ, ಜಿ.ಎಂ.ಚನ್ನಪ್ಪ, ಆರ್.ವಿ.ಗೌಡ ಇತರರು ಭಾಗವಹಿಸಿದ್ದರು.