ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನವನ್ನು ವಿರೋಧಿಸಿ ಚನ್ನರಾಯಪಟ್ಟಣ ನಾಡಕಛೇರಿ ಮುಂದೆ ನೆಡೆಯುತ್ತಿರುವ ಹೋರಾಟವು 730 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ರೈತರು ಧರಣಿ ಸ್ಥಳದಲ್ಲಿ ಇಂದು ಅವಲೋಕನ ಸಭೆ ನಡೆಸಿ ಸರ್ಕಾರಗಳ ವರ್ತನೆ ವಿರುದ್ದ ಬೇಸರವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಚಂದ್ರತೇಜಸ್ವಿ ಅವರು ಮಾತನಾಡಿ, ಕೃಷಿ ಭೂಮಿಯ ಉಳಿಗಾಗಿ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಅನಿರ್ದಿಷ್ಟಾವಧಿ ಧರಣಿ ಕುಳಿತು ಎರಡು ವರ್ಷಗಳು ಕಳೆದಿದೆ, ಮಳೆ ಗಾಳಿ ಬಿಸಿಲು ಲೆಕ್ಕಿಸದೆ 730 ದಿನಗಳಿಂದ ಬೀದಿಯಲ್ಲಿ ಕುಳಿತಿರುವ ರೈತರು ತಮ್ಮ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವಂತೆ ಒತ್ತಾಯಿಸುತ್ತಿದ್ದಾರೆ.
ವಿವಿಧ ರೀತಿಯ ಪ್ರತಿಭಟನೆಗಳ ಮೂಲಕ ಸರ್ಕಾರಗಳ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಆದರೆ ಸರ್ಕಾರಗಳು ಮಾತ್ರ ಕನಿಷ್ಠ ಸೌಜನ್ಯ ಇಲ್ಲದೆ ಕ್ರೂರಿಗಳಂತೆ ವರ್ತಿಸುತ್ತಿವೆ. ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಒಂದುರೀತಿ ಅಧಿಕಾರ ಇಲ್ಲದಿದ್ದಾಗ ಒಂದುರೀತಿ ಗೊಸುಂಬೆಗಳಂತೆ ವರ್ತಿಸುತ್ತಿವೆ.
ಅವರನ್ನು ನಾವು ಇನ್ನೂ ನಂಬಿ ಕೂರುವುದರಲ್ಲಿ ಅರ್ಥವಿಲ್ಲ. ನಮಗೆ ಮೋಸ ಮಾಡಿರುವ ರಾಜಕೀಯ ಪಕ್ಷಗಳು ಇಂದು ನಮ್ಮ ಮನೆ ಬಾಗಿಲಿಗೆ ಬಂದು ಓಟು ಕೇಳುತ್ತಿವೆ. ಅವರಿಗೆ ಸರಿಯಾಗಿ ಉತ್ತರ ಕೊಡುವ ಕಾಲ ಬಂದಿದೆ. ಉತ್ತರ ಕೊಡೋಣ ಎಂದು ಹೇಳಿದರು.ವಕೀಲರಾದ ಸಿದಾರ್ಥ್ ರವರು ಮಾತನಾಡಿ, ಬಂಡವಾಳಶಾಹಿಗಳ ಪರವಾದ ಸರ್ಕಾರಗಳು ಎಂದಿಗೂ ರೈತರ ಪರವಾದ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂದು ಯಾವುದೇ ಪಕ್ಷಗಳನೇತೃತ್ವದ ಸರ್ಕಾರವಾದರೂ ಒಂದೆ ಬಗೆಯಲ್ಲಿ ವರ್ತಿಸುತ್ತವೆ. ಅವರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.
ಜನಶಕ್ತಿ ಒಂದೆ ಇದಕ್ಕೆ ಪರಿಹಾರ. ಭೂಮಿ ನಮ್ಮನ್ನೆಲ್ಲ ಸಲಹುವ ತಾಯಿ ಅದನ್ನ ನಾವು ಉಳಿಸಿಕೊಳ್ಳಲೇಬೇಕು. ಯಾವುದೇ ತ್ಯಾಗಕ್ಕಾದರೂ ನಾವು ಸಿದ್ದರಾಗೋಣ. ಎಂದರು.ಮುಖಂಡರಾದ, ಮಾರೇಗೌಡ ಮಾತನಾಡಿ, ಹಿಂದಿನ ಸರ್ಕಾರ ರೈತರನ್ನು ಕಡೆಗಣಿಸಿ ನಮ್ಮೆಲ್ಲರ ಮೇಲೆ ಕೇಸು ದಾಖಲಿಸಿತು. ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ನಮ್ಮ ಧರಣಿ ಸ್ಥಳಕ್ಕೆ ಬಂದು ರೈತರ ಪರವಾಗಿ ನಿಲ್ಲುವುದಾಗಿ ಹೇಳಿ ನಮ್ಮನ್ನು ಬೆಂಬಲಿಸಿ ಮಾತನಾಡಿದರು. ನಂತರ ಅವರೇ ಅಧಿಕಾರಕ್ಕೆ ಬಮದು ಮುಖ್ಯಮಂತ್ರಿಗಳಾದರೂ ಇದುವರೆಗೂ ಯಾವುದೇ ತೀರ್ಮಾನಕ್ಕೂ ಬಾರದೇ ರೈತರನ್ನು ಕಾಡುತ್ತಿದ್ದಾರೆ.
ಅಲ್ಲದೆ ನಮ್ಮ ಶಾಸಕರು ಕೂಡ ನಾಟಕವಾಡುತ್ತ ರೈತರನ್ನು ಕಡೆಗಣಿಸುತ್ತಿದ್ದಾರೆ. ಅವರೆಲ್ಲ ನಾಟಕಗಳು ನಮಗೆ ಅರ್ಥವಾಗಿವೆ. ಇನ್ನು ನಾವು ನಂಬುವ ಸ್ಥಿತಿಯಲ್ಲಿ ಇಲ್ಲ. ಎಂದರು.ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪನವರು ಮಾತನಾಡಿ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ರೈತ ವಿರೋಧಿಗಳಾದ ಎರಡು ರಾಜಕೀಯ ಪಕ್ಷಗಳನ್ನು ವಿರೋಧಿಸಿ ನಮ್ಮ ಹೋರಾಟದ ನಿಲುವು ಮತ್ತು ನಮ್ಮ ಮುಂದಿನ ಎಲ್ಲಾ ತೀರ್ಮಾನಗಳನ್ನು ನಾಳೆ ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಲಾಗುವುದು ಎಂದು ಹೇಳಿದರು.ಸಭೆಯಲ್ಲಿ, ಅಶ್ವಥಪ್ಪ, ವೆಂಕಟೇಶ್, ಸೋಣ್ಣೇಗೌಡ, ಸೀನಪ್ಪ, ನಂಜೇಗೌಡ, ಮೋಹನ್, ನಾರಾಯಣಸ್ವಾಮಿ, ಮುನಿರಾಜು, ಮುನಿಕೃಷ್ಣ, ನಾರಾಯಣಮ್ಮ, ಮುನಿಯಮ್ಮ, ವೆಂಕಟರಮಣಪ್ಪ ಪಿಳ್ಳಪ್ಪ ಸೇರಿದಂತೆ ರೈತರು, ರೈತ ಮಹಿಳೆಯರು ಮುಖಂಡರು ಹಾಜರಿದ್ದರು.