ಮುಳಬಾಗಲು: ಜಿಲ್ಲಾದ್ಯಂತ ಒತ್ತುವರಿಯಾಗಿರುವ ಕೆರೆ ರಾಜಕಾಲುವೆ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ, ಮುಂಗಾರು ಮಳೆಯಿಂದ ರೈತರ ಬೆಳೆ ಹಾಗೂ ಬಡವರ ಬದುಕನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಮೇ 15ರ ಸೋಮವಾರ ಎ.ಸಿ ಕಚೇರಿ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಹೊರವಲಯದಲ್ಲಿರುವ ಅರಣ್ಯ ಇಲಾಖೆ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಂದಾಯ ಹಾಗೂ ಸರ್ವೆ ಅಧಿಕಾರಿಗಳಿಗೆ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸಬೇಕೆಂದರೆ ಸಿಬ್ಬಂದಿ ಕೊರತೆ ಆದರೆ, ರಾತ್ರೋರಾತ್ರಿ ಸರ್ಕಾರಿ ಆಸ್ತಿಗಳನ್ನು ಭೂಗಳ್ಳರಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡಲು ಮಾತ್ರ ಸಿಬ್ಬಂದಿ ಕೊರತೆ ಇರುವುದಿಲ್ಲವೆಂದು ತಾಲ್ಲೂಕು ಆಡಳಿತದ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೂರು ವರ್ಷಗಳಿಂದ ಸುರಿಯುತ್ತಿರುವ ದಾರಾಕಾರ ಮುಂಗಾರು ಮಳೆ ಸೃಷ್ಟಿಸುತ್ತಿರುವ ಅವಾಂತರಗಳಿಂದ ಲಕ್ಷಾಂತರ ಬಡವರ ಬದುಕು ಬೀದಿಗೆ ಬೀಳುವ ಜೊತೆಗೆ ರೈತರ ಬೆಳೆ ಕೈಗೆ ಬರುವ ಸಮಯದಲ್ಲಿ ಸಂಪೂರ್ಣವಾಗಿ ಮಳೆ ನೀರು ಹರಿದು ರೈತರ ಬದುಕು ಮುಂಗಾರು ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್ಪಾಷ ಮಾತನಾಡಿ ರೈತ 1 ಎಕರೆ ಬೆಳೆ ಬೆಳೆಯಬೇಕಾದರೆ 3 ಲಕ್ಷ ಬಂಡವಾಳ ಹಾಕಬೇಕು ಆ ಬೆಳೆ ಕೈಗೆ ಬರುವ ಸಮಯದಲ್ಲಿ ಮುಂಗಾರು ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯಲು ರಾಜಕಾಲುವೆಗಳು ಇಲ್ಲದೆ. ನೇರವಾಗಿ ರೈತರ ತೊಟಗಳಿಗೆ ನುಗ್ಗಿ ಸಂಪೂರ್ಣವಾಗಿ ನಷ್ಟ ಅನುಭವಿಸುತ್ತಿದ್ದರೂ ಒತ್ತುವರಿಯಾಗಿರುವ ರಾಜಕಾಲುವೆ ಕೆರೆಗಳನ್ನು ತೆರವುಗೊಳಿಸಲು ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪ ಮಾಡಿದರು.
ಜಿಲ್ಲೆಯ ಜಲ ಮೂಲಗಳಾದ ಕೆರೆಗಳು ಇಂದು ರಿಯಲ್ ಎಸ್ಟೇಟ್ ಹಾಗೂ ಅಧಿಕಾರಿಗಳ ಹಣದಾಹಕ್ಕೆ ದಿನೇ ದಿನೇ ಕ್ಷೀಣಿಸುವ ಜೊತೆಗೆ ಸಂಪೂರ್ಣವಾಗಿ ಒತ್ತುವರಿಯಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೆರೆಗಳನ್ನು ಮಾರಾಟ ಮಾಡುತ್ತಿದ್ದರೆ ಮಳೆ ನೀರು ಕೆರೆಗಳಿಗೆ ಹರಿಯುವ ಮೂಲ ಕಾಲುವೆಗಳಾದ ರಾಜಕಾಲುವೆಗಳು ಬಲಾಡ್ಯರು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು ಹಾಗೂ ಮನೆಗಳನ್ನು ಕಟ್ಟಿಕೊಂಡು ಬಡವರ ಬದುಕಿನ ಜೊತೆ ಚಲ್ಲಾಟವಾಡುತ್ತಿದ್ದರು,
ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಸಮಸ್ಯೆಯಾದಾಗ ನೆಪ ಮಾತ್ರಕ್ಕೆ ಸ್ಥಳಕ್ಕೆ ಬಂದು 24 ಗಂಟೆಯಲ್ಲಿ ತೆರವುಗೊಳಿಸುತ್ತೇನೆಂದು ಸುಳ್ಳು ಭರವಸೆ ನೀಡಿ ನಾಪತ್ತೆಯಾದರೆ ಮತ್ತೆ ಅಧಿಕಾರಿಗಳ ಪ್ರತ್ಯಕ್ಷ ವರ್ಷಕ್ಕೆ ಸಮಸ್ಯೆಯಾದಾಗ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
24 ಗಂಟೆಯಲ್ಲಿ ಜಿಲ್ಲಾದ್ಯಂತ ಒತ್ತುವರಿಯಾಗಿರುವ ಕೆರೆ ರಾಜಕಾಲುವೆ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಮುಂಗಾರು ಮಳೆಯಿಂದ ರೈತರ ಬೆಳೆ ಬಡವರ ಬದುಕನ್ನು ರಕ್ಷಣೆ ಮಾಡಬೇಕೆಂದು ಉಪ ವಿಭಾಗಾಧಿಕಾರಿಗಳನ್ನು ಒತ್ತಾಯಿಸಿ ಮೇ-15 ರ ಸೋಮವಾರ ಎ.ಸಿ. ಕಛೇರಿ ಮುಂದೆ ಹೋರಾಟ ಹಮ್ಮಿಕೊಳ್ಳುವ ಮುಖಾಂತರ ಮುಂಗಾರು ಮಳೆಯಿಂದ ಬಡವರ ರಕ್ಷಣೆಯ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಜಿಲ್ಲಾ ಕಾರ್ಯಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಬಂಗಾರಿ ಮಂಜು, ಭಾಸ್ಕರ್, ಸುನಿಲ್ಕುಮಾರ್, ರಾಜೇಶ್, ಗುರುಮೂರ್ತಿ, ವಿಶ್ವ, ವಿಜಯ್ಪಾಲ್, ಶೈಲಜ, ವೆಂಕಟಮ್ಮ, ರತ್ನಮ್ಮ ಮುಂತಾದವರು ಇದ್ದರು.
Leave a Review