ಬೆಂಗಳೂರು: ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ಸ್ಯಾಂಡಲ್ವುಡ್ನ ನಟ ಚೇತನ್ ಚಂದ್ರ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕಗ್ಗಲಿಪುರದ ಬೇಕರಿಯೊಂದರ ಬಳಿ ನಡೆದಿದೆ.
ಸ್ಯಾಂಡಲ್ವುಡ್ನ ನಟ ಚೇತನ್ ಚಂದ್ರ ಕನಕಪುರದ ಬಳಿಯ ದೇವಸ್ಥಾನವೊಂದಕ್ಕೆ ಹೋಗಿ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಗ್ಗಲಿಪುರದಲ್ಲಿ ಹೋಗುವಾಗ ಯುವಕನೊಬ್ಬ ವೀಲ್ಹಿಂಗ್ ಮಾಡಿಕೊಂಡು ಬಂದು ನಟನನ್ನು ಸತಾಯಿಸಿದ್ದಾನೆ. ನಂತರ ಅಡ್ಡಗಟ್ಟಿ ನಿಂತು ಕಾರಿಗೆ ಹಾನಿ ಮಾಡಿದ್ದಲ್ಲದೇ ಚೇತನ್ ಮೇಲೆ ಕಬ್ಬಿಣದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ.
ಈ ವೇಳೆ ಕಾರಿಂದ ಇಳಿದು ಪ್ರತಿಕ್ರಿಯೆಗೆ ನಟ ಮುಂದಾಗಿದ್ದಾರೆ. ಆಗ ಯುವಕನ ಜೊತೆಗಿದ್ದ ಯುವತಿ ಅವನಿಗೆ ಏನು ಮಾಡಬೇಡಿ, ಅವನು ಮದ್ಯಪಾನ ಮಾಡಿದ್ದಾನೆ ಎಂದಿದ್ದಾಳೆ. ಹೀಗಾಗಿ ನಟ ಏನು ಮಾಡಿಲ್ಲ. ಬಳಿಕ ಅದೇ ಸ್ಥಳಕ್ಕೆ ಬಂದ 15-20 ಯುವಕರು ಚೇತನ್ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಟನ ಬಳಿಯಿದ್ದ ಚೈನ್, ಸ್ವಲ್ಪ ಹಣ ಮತ್ತು ವಿಡಿಯೋ ಮಾಡುತ್ತಿದ್ದ ಮೊಬೈಲ್ ಅನ್ನು ಕಸಿದುಕೊಂಡು ಹೋಗಿದ್ದಾರೆ.
ಪುಂಡರ ದಾಳಿಯಿಂದ ಚೇತನ್ ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದು ಹೆಚ್ಚು ರಕ್ತಸ್ರಾವವಾಗಿದೆ. ಸದ್ಯ ನಟನನ್ನು ಕಗ್ಗಲಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಶಿಫ್ಟ್ ಮಾಡಲಾಗಿದೆ. ಕಗ್ಗಲಿಪುರ ಪೊಲೀಸ್ ಠಾಣೆಗೆ ನಟ ದೂರು ನೀಡಿದ್ದಾರೆ.