ಬೆಂಗಳೂರು: ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಹೋದರೆ ಅವರು ನಮ್ಮ ಕೈಗೆ ಸಿಗಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಪಟ್ಟಂತೆ ಮಾತಿಗೆ ಮನ್ನಣೆ ನೀಡಲ್ಲ. ಅಧಿಕಾರಿಗಳ ವರ್ಗಾವಣೆಯೂ ನಮ್ಮ ಗಮನಕ್ಕೆ ಬಾರದೆ ನಡೆಯುತ್ತದೆ ಎಂದು ತಮ್ಮ ಹತ್ತುಹಲವಾರು ಸಮಸ್ಯೆಗಳನ್ನು ಈಡೇರಿಸುತ್ತಿಲ್ಲ ಎಂದು ಮುಖ್ಯಮಂತ್ರಿಯವರ ಮುಂದೆ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ತೋಡಿಕೊಂಡಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಬಹುತೇಕ ಸಭೆಯಲ್ಲಿ ತಮ್ಮ ಜಿಲ್ಲಾ ಉಸ್ತುವಾರಿ ಸಚಿವರುಗಳ ವಿರುದ್ಧ ದೂರಿನ ಸುರಿಮಳೆಗೈದಿದ್ದಾರೆ ಎಂದು ತಿಳಿದುಬಂದಿದೆ.
ತಾವು ಯಾವುದೇ ಶಿಫಾರಸ್ಸು ಮಾಡಿದರೂ ಅದಕ್ಕೆ ಮನ್ನಣೆ ದೊರೆಯುವುದಿಲ್ಲ. ಅವರ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರೆ ನಮ್ಮ ಕೆಲಸ ಯಾವುದೂ ನಡೆಯುವುದಿಲ್ಲ. ನಮ್ಮಗಳ ಗಮನಕ್ಕೆ ಬಾರದೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ವರ್ಗಾವಣೆ ನಡೆಯುತ್ತದೆ. ಹೀಗಾದರೆ ಕ್ಷೇತ್ರದಲ್ಲಿ ನಮ್ಮ ಪಾಡೇನು ಎಂದು ಶಾಸಕರು ಮುಖ್ಯಮಂತ್ರಿಗಳ ಮುಂದೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಸುಮಾರು 50 ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ಬರದೆ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಯಾಗಿದೆ. ಕ್ಷೇತ್ರದಲ್ಲಿ ಯಾವ ರೀತಿ ಕೆಲಸ ಮಾಡಬೇಕು. ಜನ ಸಾಮಾನ್ಯರ ಕೆಲಸ ಮಾಡಬೇಕೆಂದರೆ ಅಧಿಕಾರಿಗಳೊಂದಿಗೆ ಸಹಕರಿಸಿ ಅವರ ಕೆಲಸ ಹೇಗೆ ಮಾಡಿಸಬೇಕು ಎಂದು ಕೇಳಿದ್ದಾರೆ. ತಮ್ಮ ಮಾತಿಗೆ ಮನ್ನಣೆ ನೀಡದ ಜಿಲ್ಲಾ ಸಚಿವರುಗಳನ್ನು ಕೂಡಲೇ ಬದಲಾಯಿಸಿ ಎಂದು ಕೇಳಿದ್ದಾರೆ.
ವಿಧಾನಸಭೆ ಚುನಾವಣೆ ಇನ್ನೆರೆಡು ವರ್ಷಗಳಿವೆ. ಆ ವೇಳೆಗೆ ನಾವು ಪಕ್ಷವನ್ನು ಸದೃಢಗೊಳಿಸಿ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಒಂದು ಹಂತದಲ್ಲಿ ವಿಷಯವೊಂದಕ್ಕೆ ಸಂಬಂಧಪಟ್ಟಂತೆ ಇಬ್ಬರ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪುವ ಪರಿಸ್ಥಿತಿ ತಲೆದೋರಿತು ಎಂದು ಹೇಳಲಾಗಿದೆ.
ಸಚಿವರ ನಡೆಗೆ ಬೇಸರ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಮುಂದೆ ತಮ್ಮ ಸಮಸ್ಯೆ ತೋಡಿಕೊಂಡ ಶಾಸಕರು



