ಬೇಲೂರು: ವಿಜ್ಞಾನ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ವಿಜ್ಞಾನವು ವಿದ್ಯಾರ್ಥಿಗಳ ಅತ್ಯುತ್ತಮ ಭವಿಷ್ಯವನ್ನು ರೂಪಿಸಿ ಕೊಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಪಟ್ಟಣದ ದಿವ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ಬೆಳವಣಿಗೆಯಿಂದ ಎಷ್ಟು ಅನುಕೂಲವಿದೆಯೋ ಅಷ್ಟೆ ಅನಾನೂಕೂಲವು ಇದೆ ಎಂಬುದನ್ನು ಮರೆಯಬಾರದು.
ನಾವು ವೈಜ್ಞಾನಿಕವಾಗಿ ಚಿಂತನೆ ಮಾಡಿದಾಗ ಸತ್ಯದ ದಾರಿ ಅರಿವಾಗುತ್ತದೆ ಇಲ್ಲದಿದ್ದರೆ ಕೇವಲ ಆಚರಣೆಗಳು ಮೌಡ್ಯದ ಮನಸ್ಥಿತಿಯೊಳಗೆ ಹೆದರಿ ಜೀವನ ಮಾಡಬೇಕಾಗುತ್ತದೆ ಎಂಬುದನ್ನ ಅರಿತ ಮಹಾನ್ ಚೇತನಗಳು ದೇಶದಲ್ಲಿ ವಿಜ್ಞಾನವನ್ನು ಬೆಳೆಸಿ ದೇಶವನ್ನು ಸದೃಡಗೊಳಿಸಲು ಸಾಕಷ್ಟು ಶ್ರಮಿಸಿದ್ದಾರೆ.
ಅದರಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಚಂದ್ರನಲ್ಲಿಗೆ ಹೋಗುತಿದ್ದೇವೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ವೈಜ್ಞಾನಿಕ ಬೆಳವಣಿಗೆಯನ್ನು ಕಲಿಸಿದರೆ ಅವರು ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ. ಆದ್ದರಿಂದ ವಿಜ್ಞಾನದ ಮಹತ್ವವನ್ನು ತಿಳಿಯಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಿವ್ಯ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆ ಅಧ್ಯಕ್ಷ ಗೌಡೇಗೌಡ, ಚಿಕ್ಕಂದಿನಲ್ಲೆ ಮಕ್ಕಳಿಗೆ ವೈಜ್ಞಾನಿಕವಾಗಿ ವಿಷಯ ತಿಳಿಸಿದರೆ ಅವರು ಮುಂದೆ ದೇಶದ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯಲ್ಲಿ ಮಕ್ಕಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಿದ್ದು,
ನೂರಾರು ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರರ್ಶಿಸಿದ್ದು ಅವರು ಮುಂದೋಂದು ದಿನ ನಮ್ಮ ದೇಶದ ಅಬ್ದುಲ್ ಕಲಾಂ ಹಾಗೂ ಸರ್ ಸಿ.ವಿ.ರಾಮನ್ರಂತೆ ಉತ್ತಮ ಸಾಧನೆ ಮಾಡಿ ಕೀರ್ತಿವಂತರಾಗಿ ಸಾಧನೆಯ ಶಿಖರ ಏರಬೇಕು ಎಂದರು.
ದಿವ್ಯ ವಿದ್ಯಾ ಸಂಸ್ಥೆ ನಿರ್ದೇಶಕ ನಾಗರಾಜು, ಮುಖ್ಯ ಶಿಕ್ಷಕ ಉಮೇಶ್, ಶಿಕ್ಷಕ ಪುಟ್ಟೇಗೌಡ, ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರಿದ್ದರು.