ಹೊಸಕೋಟೆ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎ. ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಮತ್ತು ವಿಭಾಗದ ಸಿಬ್ಬಂದಿಯಿಂದ ತಾಲೂಕಿನ ಕಂಬಳೀಪುರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಸ್ಥಳೀಯ ಆಡಳಿತ ಮತ್ತು ಪಂಚಾಯತ್ರಾಜ್ ಕಾಯಿದೆಯ ಅನ್ವಯ ಹೇಗೆ ಅಧಿಕಾರ ಹಾಗೂ ಕಾರ್ಯನಿರ್ವಹಣೆ ವಿಕೇಂದ್ರೀಕರಣಗೊಂಡಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಪಂಚಾಯಿತಿಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಎಂ.ಎ. ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ರವರು ಪಂಚಾಯಿತಿಯ ಅಧಿನಿಯಮಗಳು, ಅಧಿಕಾರ ಮತ್ತು ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಪ್ರಾಯೋಗಿಕವಾಗಿ ವಿವರಿಸಿದರು.ಪಂಚಾಯಿತಿ ಕಾರ್ಯದರ್ಶಿ ಪುನೀತ್ರವರು ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಗಳು, ಸಾಮಾನ್ಯ ಸಭೆ, ಸದಸ್ಯರ ಅಧಿಕಾರ, ಅಧ್ಯಕ್ಷರು, ಉಪಾಧ್ಯಕ್ಷರ ಪಾತ್ರ ಕುರಿತು ವಿವರಿಸಿದರು.
ಪಂಚಾಯಿತಿ ಕಂದಾಯ ಇಲಾಖೆ ಕಾರ್ಯದರ್ಶಿ ರಫೀಕ್ರವರು ಮಾತನಾಡಿ ಭಾರತದ ಆಡಳಿತ ವಿಕೇಂದ್ರೀಕರಣ, 73ನೇ ಸಂವಿಧಾನ ತಿದ್ದುಪಡಿ, ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಸಜ್ಜುಗೊಳ್ಳುವಿಕೆಯ ಮಹತ್ವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವಿವಿಧ ಉದ್ಯೋಗಗಳನ್ನು ಪಡೆಯುವ ಕುರಿತು ಮಾಹಿತಿ ನೀಡಿದರು.
ಪಠ್ಯಾಭ್ಯಾಸದೊಂದಿಗೆ ಇಂತಹ ಪ್ರಾತ್ಯಕ್ಷಿಕೆಯು ಸುಲಭವಾಗಿ ವಿಷಯವನ್ನು ಅಥ್ರೈಸಿಕೊಳ್ಳಲು ಸಹಕಾರಿಯಾಗಲಿದೆ. ಮುಂದೆ ಉದ್ಯೋಗದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತಾ, ಪಂಚಾಯಿತಿ ಸದಸ್ಯರುಗಳಾದ ಮುನಿಯಪ್ಪ, ರಮೇಶ್, ರಾಜ್ಯಶಾಸ್ತ್ರ ವಿಭಾಗದ ಡಾ: ಈರಣ್ಣ, ಎನ್.ಶ್ರೀನಿವಾಸಚಾರ್, ಡಾ: ಕಾವಲಯ್ಯ, ಶ್ರೀನಿವಾಸಪ್ಪ, ಸೌಭಾಗ್ಯ, ತ್ರಿಮೂರ್ತಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ವಿಚಾರ ವಿನಿಮಯ, ಪ್ರಶ್ನೋತ್ತರ ಕಾರ್ಯಕ್ರಮ ಸಹ ನಡೆಯಿತು.