ಕೋಲ್ಕತಾ: ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಂತಿಮ ಹಂತ ತಲುಪಿದ್ದು ಶುಕ್ರವಾರದಿಂದ ಕೋ ಲ್ಕತಾದಲ್ಲಿ ಪಂದ್ಯಗಳು ನಡೆಯಲಿವೆ. ಇನ್ನೆರಡು ವಾರಗಳ ತೀವ್ರ ಹೋರಾಟದ ಬಳಿಕ ಲೀಗ್ ನಾಕೌಟ್ ಹಂತ ತಲುಪಲಿದೆ. ಫೆ. 26ರಿಂದ ಹೈದರಾಬಾದ್ನಲ್ಲಿ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.
ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ ಮತ್ತು ಪುನೇರಿ ಪಲ್ಟಾನ್ಸ್ ತಂಡಗಳು ಈಗಾಗಲೇ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿವೆ. ಜೈಪುರ 13 ಗೆಲುವಿನಿನೊಂದಿಗೆ 77 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದರೆ ಪುನೇರಿ ಅಷ್ಟೇ ಜಯ ಸಾಧಿಸಿ 76 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ.
ಇನ್ನುಳಿದ ತಂಡಗಳು ಕೋಲ್ಕತಾ ಮತ್ತು ಪಂಚಕುಲದಲ್ಲಿ ಮುಂದಿನೆರಡು ವಾರ ನಡೆಯುವ ಕಬಡ್ಡಿ ಪಂದ್ಯಗಳಲ್ಲಿ ನಾಕೌಟ್ ಹಂತಕ್ಕೇರಲು ತೀವ್ರ ಹೋರಾಟ ನೀಡುವ ಸಾಧ್ಯತೆಯಿದೆ. ದಬಾಂಗ್ ಡೆಲ್ಲಿ 69 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ ಪಾಟ್ನಾ ಹರಿಯಾಣ ಮತ್ತು ಬೆಂಗಳೂರು ಅನಂತರದ ಸ್ಥಾನದಲ್ಲಿವೆ. ತವರಿನಲ್ಲಿ ಆಡುವ ಅವಕಾಶ ಪಡೆದ ಬೆಂಗಾಲ್ ವಾರಿಯರ್ ಸದ್ಯ 44 ಅಂಕ ಗಳಿಸಿದ್ದು ಮುನ್ನಡೆಯಲು ಎಲ್ಲ ಪಂದ್ಯಗಳಲ್ಲೂ ಜಯಭೇರಿ ಬಾರಿಸಬೇಕಾಗಿದೆ.
ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ದಿನದ ಇನ್ನೊಂದು ಪಂದ್ಯವು ಹರಿಯಾಣ ಮತ್ತು ಯುಪಿ ಯೋಧಾಸ್ ನಡುವೆ ನಡೆಯಲಿದೆ.