ವಿಜಯಪುರ: ಹೋಬಳಿಯ ವೆಂಕಟಗಿರಿಕೋಟೆ ಚನ್ನಕೇಶವಸ್ವಾಮಿ ಕಲ್ಯಾಣಮಂಟಪದಲ್ಲಿ ಬುಧವಾರ ಕರ್ನಾಟಕ ಮಾದಿಗ ದಂಡೋರ ಸಂಘಟನೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಂದ ಹಾಸನದ ಬಳಿ ಅಪಘಾತದಲ್ಲಿ ಮೃತಪಟ್ಟಿರುವವರ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ನಡೆಸಿದರು.
ತಾಲ್ಲೂಕಿನ ವಿವಿಧ ಮಾದಿಗ ಸಂಘಟನೆಗಳ ಮುಖಂಡರು, ರಾಜಕೀಯ ಮುಖಂಡರುಗಳು ಈ ಸಭೆಯಲ್ಲಿ ಭಾಗವಹಿಸಿ, ಅಪಘಾತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಧೈರ್ಯ ತುಂಬಿ, ಭವಿಷ್ಯದಲ್ಲಿ ಜೊತೆಯಾಗಿದ್ದು, ನಿಮ್ಮ ನೆರವಿಗೆ ನಾವು ಬರುತ್ತೇವೆ. ನೀವು ಅನಾಥರಲ್ಲ, ನಾವೆಲ್ಲರೂ ಇದ್ದೇವೆ. ಧೈರ್ಯವಾಗಿ ಶಿಕ್ಷಣ ಮುಂದುವರೆಸಿ ಎಂದು ಸಾಂತ್ವನ ಹೇಳಿದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಅಪಘಾತದಂತಹ ಘಟನೆ ಸಂಭವಿಸಿರುವುದು ದುರಂತ, ಆದರೂ ಸಮುದಾಯದವರು ಮಾತ್ರವಲ್ಲದೆ ತಾಲ್ಲೂಕಿನಲ್ಲಿ ಯಾವುದೇ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿದಾಗ ಸಹಕಾರ ನೀಡುವ ಮೂಲಕ ಧೈರ್ಯ ತುಂಬಿಸಿದಾಗ, ಅಂತಹವರು ಚೈತನ್ಯ ಪಡೆದುಕೊಳ್ಳುತ್ತಾರೆ. ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಅನುಕಂಪಗಳಿಗಿಂತ ಅವಕಾಶಗಳನ್ನು ಒದಗಿಸಿಕೊಡುವ ಕೆಲಸವಾಗಲಿ ಅದಕ್ಕೆ ಬೇಕಾಗಿರುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿ, 50 ಸಾವಿರ ಚೆಕ್ಕನ್ನು ನೀಡಿದರು.
ದೇವನಹಳ್ಳಿ ಮಾಜಿ ಪುರಸಭೆ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲತ್ತುಗಳನ್ನು ಅವರಿಗೆ ತಲುಪಿಸುವುದರ ಜೊತೆಗೆ, ಅವರ ಬಗ್ಗೆ ನಿಗಾವಹಿಸಬೇಕು. ಸಚಿವರೊಂದಿಗೆ ಚರ್ಚೆ ನಡೆಸಿ, ಸರ್ಕಾರದಿಂದ ಹೆಚ್ಚಿನ ನೆರವು ಕೊಡಿಸಲು ಪ್ರಯತ್ನ ಮಾಡಲಾಗುತ್ತದೆ ಎಂದರು.
ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಗದೀಶ್ ಮಾತನಾಡಿ, ಮೃತರ ಕುಟುಂಬಗಳಿಗೆ ಸಚಿವರು ಬಂದರೆ, ಜಿಲ್ಲಾಡಳಿತ ಬರುತ್ತದೆ. ಸ್ಥಳದಲ್ಲೆ ಸರ್ಕಾರದಿಂದ ಸಿಗುವಂತಹ ಸೌಲತ್ತುಗಳ ಬಗ್ಗೆ ತೀರ್ಮಾನ ಮಾಡಬಹುದು. ಮೃತರ ಕುಟುಂಬದವರಿಗೆ ತಲಾ 2 ಎಕರೆ ಭೂಮಿ ಮಂಜೂರು ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಬೇಕು. ವೈಯಕ್ತಿಕವಾಗಿ 25 ಸಾವಿರ ಕೊಡುವುದಾಗಿ ಭರವಸೆ ನೀಡಿದರು.
ಮುಖಂಡರಾದ ಚೊಕ್ಕನಹಳ್ಳಿ ಚಂದ್ರಪ್ಪ, ಮಾರಪ್ಪ, ಮುದುಗುರ್ಕಿ ಮೂರ್ತಿ, ವಕೀಲ ಎಂ.ಎಂ.ಶ್ರೀನಿವಾಸ್, ಕೃಷ್ಣಮೂರ್ತಿ, ವೆಂಕಟೇಶ್ ಪ್ರಭು, ರಾಘವ, ವೇಣುಗೋಪಾಲ್, ಚಂದ್ರಶೇಖರ್, ಪ್ರಕಾಶ್, ಮುನಿರಾಜು, ತಿರುಮಲೇಶ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.