ಯಲಹಂಕ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಕೆ ಸುಧಾಕರ್ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4.8 ಕೋಟಿ ಹಣವನ್ನು ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಮಾದನಾಯಕನಹಳ್ಳಿಪೊಲೀಸ್ ಠಾಣೆಯಲ್ಲಿ ದ ಎಫ್ ಐ ಆರ್ ದಾಖಲಾಗಿದೆ.
ಯಲಹಂಕ ವಿಧಾನಸಭಾ ಕ್ಷೇತ್ರ ಶಾಸಕ ಎಸ್ ಆರ್ ವಿಶ್ವನಾಥ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಮಾದಾವರದ ಗೋವಿಂದಪ್ಪ ಮನೆ ಮೇಲೆ ಗುರುವಾರ ಖಚಿತ ಮಾಹಿತಿ ಮೇರೆಗೆ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದು ಮಧ್ಯರಾತ್ರಿಯವರೆಗೂ ತಪಾಸಣೆ ನಡೆಸಿ ಚುನಾವಣೆ ಸಂಬಂಧ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ನಗದು ವಶಪಡಿಸಿಕೊಂಡಿದ್ದರು.
ದೂರು ಆಧರಿಸಿ ತಪಾಸಣೆ: ನೋಡಲ್ ಅಧಿಕಾರಿ ಮುನೀಶ್ ಮೂದ್ಗಿಲ್ ರವರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿದ್ದು ಮಾದಾವರದ ಗೋವಿಂದಪ್ಪ ಮನೆಯಲ್ಲಿ ಚುನಾವಣೆ ಸಂಬಂಧ 10 ಕೋಟಿ ನಗದು ಇದೆ ಎಂಬ ದೂರು ನೀಡಿದ್ದರು ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಕೂಡಲೇ ಹಿರಿಯ ಅಧಿಕಾರಿಗಳು ಹಾಗೂ ಐಟಿ ವಿಭಾಗಕ್ಕೆ ಕರೆ ಮಾಡಿ ವಿಷಯ ಮುಟ್ಟಿಸಿದ್ದು ನೋಡಲ್ ಅಧಿಕಾರಿ ಮನಿಷ್ ಮೌದ್ಗಿಲ್ ನೇತೃತ್ವದ ಎಸ್ ಎಸ್ ಟಿ ತಂಡ, ಎಂಸಿಸಿ ತಂಡ, ಐಟಿ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿ ಮನೆ ಪರಿಶೀಲಿಸಿದಾಗ 4.8 ಕೋಟಿ ಮೊತ್ತದ ನಗದು ಪತ್ತೆಯಾಗಿತ್ತು,
ಈ ವೇಳೆ ಮಾಜಿ ಆರೋಗ್ಯ ಸಚಿವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಅಧಿಕಾರಿಗಳಿಗೆ ವಾಟ್ಸಪ್ ಕರೆ ಮಾಡಿದ್ದು ಸಹಕರಿಸುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ ಡಾಕ್ಟರ್ ಕೆ ಸುಧಾಕರ್ ಕರೆ ಮಾಡಿದ ಸಾಕ್ಷಿಗಳನ್ನು ಮಾದನಾಯಕನಹಳ್ಳಿ ಪೊಲೀಸ್ ರಿಗೆ ನೀಡಿರುವ ಅಧಿಕಾರಿಗಳು ಸುಧಾಕರ್ ವಿರುದ್ಧ ದೂರು ನೀಡಿದ್ದಾರೆ.ಈ ದೂರಿನ ಅನ್ವಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಲಂ ನಂ. 171 ಬಿ, 171ಸಿ,171ಇ.171 ಎಫ್ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.