ಬೆಂಗಳೂರು: ಬಿಜೆಪಿ ಇಬ್ಬರು ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿರುವ ಪ್ರಕರಣ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು. ಬಿಜೆಪಿ ಶಾಸಕರಾದ ವೇದವ್ಯಾಸ್ ಹಾಗೂ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಶಾಸಕ ಭರತ್ ಶೆಟ್ಟಿ ಪ್ರಸ್ತಾಪಿಸಿ ಮಾತನಾಡಿದರು.
ಇದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರರು ಧ್ವನಿಗೂಡಿಸಿದರು.ಶಿಕ್ಷಕಿಯೊಬ್ಬರು ಇಂದು ಧರ್ಮಕ್ಕೆ ಅವಹೇಳನ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ವೇಳೆ ಭಾಗಿಯಾಗಿದ್ದ ಕಾರಣಕ್ಕೆ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಸ್ಥಳದಲ್ಲಿ ತಾವು ಇರದೆ ಇದ್ದರೂ ಎಫ್ಐಆರ್ ನಲ್ಲಿ ತಮ್ಮ ಹೆಸರು ನಮೂದಾಗಿರುವುದಕ್ಕೆ ಭರತ್ ಶೆಟ್ಟಿ ಆಕ್ರೋಶ ಹೊರಹಾಕಿದರು.
ಎಫ್ಐಆರ್ ದಾಖಲಿಸಿರುವ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದಿನೇಶ್ಗುಂಡೂರವಾ ಸಮರ್ಥಿಸಿ ಮಾತನಾಡಿದರು.ಇವರು ಮಂಗಳೂರಿನಲ್ಲಿ ಕೋಮುಭಾವನೆ ಕೆರಳಿಸುವ ಮಾತುಗಳನ್ನಾಡಿದ್ದಾರೆ. ಇವರು ಯಾವ ರೀತಿ ಮಾತನಾಡಿದ್ದಾರೆ ಎಂಬುದು ಕೇಳಿದ್ದೇವೆ ಎಂದು ದಿನೇಶ್ ಎಫ್ಐಆರ್ ಕ್ರಮವನ್ನು ಸಮರ್ಥಿಸಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಹಿಂದೂ ಧರ್ಮ ಅವಹೇಳನ ಮಾಡಿರುವ ಶಿಕ್ಷಕಿ ವಿರುದ್ಧ ದೂರು ನೀಡಲಾಗಿದ್ದರೂ ಎಫ್ ಐಆರ್ ದಾಖಲಾಗಿಲ್ಲ. ಎಫ್ಐಆರ್ ದಾಖಲಿಸದ ಸಬ್ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.