ಬೆಂಗಳೂರು: ಅನುಮತಿ ಇಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಕ್ಕಳ ವಿಡಿಯೋ ಅಪ್ಲೋಡ್ ಮಾಡಿದ ಹಿನ್ನೆಲೆ ಎರಡು ಖಾಸಗಿ ಯೂಟ್ಯೂಬ್ ಚಾನಲ್‍ಗಳ ವಿರುದ್ಧ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಡಿಕೆಶಿ ಕಚೇರಿ ಸಿಬ್ಬಂದಿ ಉಮೇಶ್ ಎಂಬುವರ ದೂರು ಆಧರಿಸಿ ಎಫ್‍ಐಆರ್ ದಾಖಲಿಸಲಾಗಿದೆ.
ಬಿ4ಯು ಕರ್ನಾಟಕ ಹಾಗೂ ಇಂಡಿಯಾ ರಿಪೋರ್ಟ್ ಎಂಬ ಹೆಸರಿನ ಎರಡು ಖಾಸಗಿ ಯೂಟ್ಯೂಬ್ ಚಾನಲ್‍ಗಳು ಹೂ ಇಸ್ ಅಭರಣ ಡಿ.ಕೆ ಶಿವಕುಮಾರ್ ಹಾಗೂ ಡಿಕೆಶಿ ಮಗ ಯಾರು..?, ಬಂಡೆ ಮಕ್ಕಳು ಏನ್ಮಾಡ್ತಿದ್ದಾರೆ? ಎಂಬ ಟೈಟಲ್ ನೀಡಿ ವಿಡಿಯೋ ಸೃಷ್ಟಿಸಿ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಅನುಮತಿ ಇಲ್ಲದೆ ಫೋಟೋ, ವಿಡಿಯೋ ಅಪ್ಲೋಡ್ ಮಾಡಿರುವ ಹಿನ್ನೆಲೆ ಐಟಿ ಅಕ್ಟ್ ನಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಮೇಶ್ ದೂರುನೀಡಿದ್ದರು. ಡಿಕೆ ಶಿವಕುಮಾರ್ ಮಕ್ಕಳು ಮೀಡಿಯಾ ಮುಂದೆ ಬರೋದಿಲ್ಲ ಯಾಕೆ? ಎಂದು ಇಂಡಿಯಾ ರಿಪೋರ್ಟ್ ವರದಿ ಮಾಡಿದೆ.
ಈ ರೀತಿ ಅನುಮತಿ ಇಲ್ಲದೇ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ವಿಡಿಯೋವನ್ನು ಡಿಲೀಟ್ ಮಾಡಿಸಬೇಕೆಂದು ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಉಮೇಶ್ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಹೀಗಾಗಿ ಈ ದೂರಿನನ್ವಯ ಎರಡೂ ಯೂಟ್ಯೂಬ್ ವಾಹಿನಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Leave a Review