ಬೇಲೂರು: ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಸದೃಡಗೊಳಿಸುವ ಗ್ರಾಮೀಣ ಕ್ರೀಡೆಗಳು ವಿನಾಶವಾಗುತ್ತಿರುವ ಹಿನ್ನಲೆಯಲ್ಲಿ ಬೇಲೂರು ವಾಲಿಬಾಲ್ ಕ್ಲಬ್ ಮುಂದಿನ ದಿನದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಬೇಲೂರು ತಾಲ್ಲೂಕು ವಾಲಿಬಾಲ್ ಕ್ಲಬ್ ಅಧ್ಯಕ್ಷ ಬಿ.ಎಂ.ಸಂತೋಷ್ ಹೇಳಿದರು.
ನಗರದ ದೇಗುಲ ರಸ್ತೆಯ ಬಿಆರ್ಸಿ ಕವೇರಿ ಅವರಣದಲ್ಲಿ ಬೇಲೂರು ತಾಲ್ಲೂಕು ವಾಲಿಬಾಲ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಪ್ರಥಮ ವರ್ಷದ ಬಾಲಕರ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಬಾಲಿಬಾಲ್ ಕ್ರೀಡೆಗೆ ಜಗತ್ತಿನಲ್ಲಿ ತನ್ನದೆಯಾದ ಐತಿಹಾಸಿಕವಿದೆ ಎಂಬ ಹಿನ್ನಲೆಯಲ್ಲಿ ಈ ಶೀರ್ಷಿಕೆಯನ್ನು ನೀಡುವ ಮೂಲಕ ಕ್ಲಬ್ ಆರಂಭ ಮಾಡಲಾಗಿದೆ.
ವಿಶೇಷವಾಗಿ ಗ್ರಾಮೀಣ ಮಕ್ಕಳಲ್ಲಿನ ಅಗಾಧವಾದ ಕ್ರೀಡಾ ಮನೋಭಾವನೆ ಹೊಂದಿರುವ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ ನೆರವು ನೀಡಲು ಕ್ಲಬ್ ಬದ್ಧವಾಗಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇಲ್ಲಿಯತನಕ ಸಮಪರ್ಕ ಆಟ ಮೈದಾನವಿಲ್ಲದಿರುವ ನಿಜಕ್ಕೂ ಶೋಚನೀಯ. ಮೈದಾನ ಉಳಿಸುವ ನಿಟ್ಟಿನಲ್ಲಿ ಸಂಸ್ಥೆ ಕೈಲಾದ ಸಹಾಯ ಹಸ್ತ ನೀಡಲಿದೆ. ವಿದ್ಯಾರ್ಥಿಗಳಲ್ಲಿನ ಕ್ರೀಡಾ ಮನೋಭಾವನೆಯನ್ನು ಗುರುತಿಸಿ ಅವರಿಗೆ ಬೆಂಬಲ ನೀಡುವುದು ಪೋಷಕರು ಮತ್ತು ಶಿಕ್ಷಕ ಪಾಲು ಅತ್ಯಗತ್ಯವಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಹಾಸನ ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಪರೀಕ್ಷೆಯ ಅಂಕವನ್ನು ಹೊರತು ಪಡಿಸಿ ಯಾವುದೇ ನೈತಿಕ ಶಿಕ್ಷಣ ನೀಡಲು ಮುಂದಾಗುತ್ತಿಲ್ಲ, ಒಂದು ಮಗುವಿಗೆ ಸಮಗ್ರ ಶಿಕ್ಷಣವೆಂದರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಕೂಡ ಪೂರಕವಾಗುವ ನಿಟ್ಟಿನಲ್ಲಿ ಪ್ರತಿ ಶಾಲಾ-ಕಾಲೇಜಿನಲ್ಲಿ ಕ್ರೀಡಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಡ್ಡಾಯ ದೈಹಿಕ ಶಿಕ್ಷಣವನ್ನು ಅಳವಡಿಸಬೇಕಿದೆ.
ಹಾಗೇಯೆ ಪಠ್ಯ ಕ್ರಮದಲ್ಲಿ ದೈಹಿಕ ಶಿಕ್ಷಣದ ಮಹತ್ವ ಮತ್ತು ಕ್ರೀಡೆಗಳ ಪರಿಚಯಗೊಳಿಸಬೇಕು.ಬೇಲೂರು ತಾಲ್ಲೂಕು ವಾಲಿಬಾಲ್ ಕ್ಲಬ್ ಆರಂಭಿಸಿ ಉತ್ಸಾಹಿ ಕ್ರೀಡಾಪಟುಗಳಿಗೆ ಪೂರ್ಣ ಬೆಂಬಲ ನೀಡುವುದು ಸಂತೋಷ ತಂದಿದೆ. ಕ್ರೀಡೆ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಭಾರತ ಅಂತಹ ಸಾಧನೆಗೆ ಮುಂದಾಗಲು ಇಂತಹ ಕ್ರೀಡೆಗಳು ಉತ್ತೇಜನ ನೀಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಎಂ.ಪೃಥ್ವಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪಾಲಾಕ್ಷಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಬಿ.ಎನ್.ಆನಂದ್, ಉಪಾಧ್ಯಕ್ಷ ಆರ್.ವೆಂಕಟೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಹಿರಿಯ ಕ್ರೀಡಾಪಟು ಲೋಕೇಶ್, ಅಂತರರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಬಾಬು ಪ್ರಸಾದ್, ಮುಖ್ಯ ಶಿಕ್ಷಕಿ ಪಾರ್ವತಿ, ಎಸ್ಡಿಎಂಸಿ ಅಧ್ಯಕ್ಷ ಪ್ರಸನ್ನ, ಸದಸ್ಯರಾದ ಸೌಮ್ಯ ಆನಂದ್, ನಂದಿಶಯ್ಯ, ಶ್ರೇಯಸ್, ಕಾವ್ಯ ಸಂತೋಷ್ ಇನ್ನು ಮುಂತಾದವರು ಹಾಜರಿದ್ದರು.