ನಂದ್ಯಾಲ(ಆಂದ್ರಪ್ರದೇಶ): ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತರು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಅಲ್ಲಗಡ್ಡ ಮಂಡಲದ ನಲ್ಲಗಟ್ಲ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ನಂದ್ಯಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ ರಘುವೀರಾ ರೆಡ್ಡಿ ಮಾತನಾಡಿ, ಕುಟುಂಬವು ತಿರುಪತಿಯ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿತ್ತು ಮತ್ತು ಇಂದು ಮುಂಜಾನೆ 5.15 ರ ಸುಮಾರಿಗೆ ನಲ್ಲಗಟ್ಲ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಟ್ರಕ್ಚಾಲಕ ಗಾಡಿಯನ್ನು ರಸ್ತೆಯ ಬದಿಗೆ ನಿಲ್ಲಿಸಿದ್ದರು, ಅದೇ ಸಮಯದಲ್ಲಿ ಕಾರೊಂದು ಬಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಫೆಬ್ರವರಿ 29ರಂದು ವಿವಾಹವಾಗಿದ್ದರು, ಕುಟುಂಬವು ಸಿಕಂದರಾಬಾದ್ನ ಅಲ್ವಾಲ್ ಪ್ರದೇಶದಕ್ಕೆ ಸೇರಿದೆ. ವಾರದ ಹಿಂದೆ ವಿವಾಹವಾಗಿದ್ದ ಬಾಲಕಿರಣ್ ಮತ್ತು ಕಾವ್ಯ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬಾಲಕಿರಣ್ನ ತಾಯಿ ಮಂತ್ರಿ ಲಕ್ಷ್ಮಿ ಮತ್ತು ತಂದೆ ಮಂತ್ರಿ ರವೀಂದರ್ ಮತ್ತು ಕಿರಿಯ ಸಹೋದರ ಉದಯ್ ಕೂಡ ಸಾವನ್ನಪ್ಪಿದ್ದಾರೆ.