ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಮಂದಿರದ ಶಿಖರದಲ್ಲಿ ಕೇಸರಿ ಧರ್ಮಧ್ವಜಾರೋಹಣ ನೇರವೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ್ದಾರೆ. ಇಂದು ಬೆಳಿಗ್ಗೆ ೧೦ ಗಂಟೆ ಸರಿಯಾಗಿ ಅಯೋಧ್ಯೆಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ನರೇಂದ್ರ ಮೋದಿ ಮೊದಲಿಗೆ ರಾಮಪಥದಲ್ಲಿ ಒಂದು ಕಿ.ಮೀನಷ್ಟು ಉದ್ದದ ರೋಡ್ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಅಯೋಧ್ಯೆ ರಾಮಮಂದಿರದ ಸಪ್ತ ಮಂದಿರಕ್ಕೆ ಭೇಟಿಕೊಟ್ಟು ಮಹರ್ಷಿಗಳಾದ ವಸಿಷ್ಠ, ವಿಶ್ವಮಿತ್ರ, ಅಗಸ್ತ್ಯ ವಾಲ್ಮಿಕಿ, ಅಹಲ್ಯಾದೇವಿ, ನಿಷಾದ್ರಾಜ್ಗೃಹ, ಮೂರ್ತಿಗಳ ದರ್ಶನಪಡೆದರು. ನಂತರ ಶೇಷಾವತಾರ ಭೇಟಿ ನೀಡಿ ಅನಂತರ ಮಾತಾ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದರು.
ರಾಮದರ್ಭಾರ್ಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಬಾಲರಾಮನಿಗೆ ಪೂಜೆ ಸಲ್ಲಿಸಿದರು. ೧೧.೫೨ರಿಂದ ೧೨.೩೫ರೊಳಗಿನ ಅಭಿಜಿನ್ ಲಗ್ನದಲ್ಲಿ ಕೇಸರಿ ಧ್ವಜಾರೋಹಣವನ್ನು ನೆರವೇರಿಸಿದರು. ೧೬೧ ಅಡಿ ಶಿಖರದ ಮೇಲೆ ೩೦ಅಡಿ ಧ್ವಜಸ್ತಂಭ ಸೇರಿ ಒಟ್ಟು ೧೯೧ ಅಡಿಮೇಲೆ ಧ್ವಜಾರೋಹಣ ಮಾಡಲಾಯಿತು. ಧ್ವಜದ ಮೇಲೆ ಸೂರ್ಯವಂಶಿ ಮತ್ತು ತ್ರೇತಾಯುಗದ ಚಿಹ್ನೆಗಳನ್ನು ಇರಿಸಲಾಗಿದೆ. ಧ್ವಜದಲ್ಲಿ ಭದ್ರತೆ, ಏಕತೆ, ಸಂಸ್ಕೃತಿಯ ಸಂಕೇತವಾಗಿ ಓಂ ಚಿಹ್ನೆಯೊಂದಿಗೆ ಸೂರ್ಯ ಹಾಗೂ ಕೋವಿಧಾರ ವೃಕ್ಷ ಬಳಸಲಾಗಿದೆ. ೩೬೦ ಡಿಗ್ರಿ ಬೇರಿಂಗ್ಉಳ್ಳ ಪ್ಯಾರಾಚೂಟ್ನ ರೇಷ್ಮೆ ನೈಲಾನ್ ದಾರವನ್ನು ಬಳಸಿ ೧೦ ಅಡಿ ಅಗಲ ೨೦ ಅಡಿ ಧ್ವಜವನ್ನು ನಿರ್ಮಿಸಲಾಗಿದೆ. ಈಗಾಗಲೇ ಸೇನಾಪಡೆಯ ನೆರವಿನೊಂದಿಗೆ ಒಂದು ಬಾರಿ ಧ್ವಜವನ್ನು ಟ್ರಯಲ್ ಮಾಡಲಾಗಿದೆ.
ಸಾವಿರಾರು ಭಕ್ತಸಮೂಹದ ಜಯಘೋಷದ ಸಂಭ್ರಮದ ಮಧ್ಯೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಬಾಲಿವುಡ್ ನಟರಾದ ಅಮಿತ್ಬಚ್ಚನ್, ತೆಲುಗು ನಟ ರಾಮಚರಣ್ತೇಜ್ ಮುಂತಾದವರು ಉಪಸ್ಥಿತರಿದ್ದರು. ಆರೇಳು ಸಾವಿರ ಗಣ್ಯಾತಿ ಗಣ್ಯರಿಗೆ ವಿಶೇಷ ಆಸನಗಳನ್ನು ಕಲ್ಪಿಸಲಾಗಿತ್ತು. ಕ್ಯೂರ್ಕೋಡ್ವುಳ್ಳ ವಿಶೇಷ ಆಹ್ವಾನ ಪತ್ರಿಕೆ ನೀಡಲಾಗಿತ್ತು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಸಂಪೂರ್ಣವಾದ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದೋಬಸ್ತ್ಗಾಗಿ ೬೦೦೦ ಪೊಲೀಸರು ಸೇರಿದಂತೆ ಸುಮಾರು ೧೦ ಸಾವಿರ ಇನ್ನಿತರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.



