ಮಾಗಡಿ: ನಮ್ಮ ತೆರಿಗೆ ನಮಗೆ ನೀಡಬೇಕು ಎಂದು ಕೇಂದ್ರ ಸರ್ಕಾರದ ವಿರುದ್ದವಾಗಿ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ಪಟ್ಟಣದ ಕಲ್ಯಾಗೇಟ್ ವೃತ್ತದಿಂದ ಕೆಂಪೇಗೌಡ ಆಟೋ ನಿಲ್ದಾಣದವರೆಗೂ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಘೋಷಣೆ ಕೂಗುತ್ತಾ ಪಂಜಿನ ಮೆರವಣಿಗೆ ನಡೆಸಿದರು.
ಯೂತ್ ಕಾಂಗ್ರೆಸ್ ಜಿಲ್ಲಾದ್ಯಕ್ಷ ಗುರುಪ್ರಸಾದ್ ಮಾತನಾಡಿ ಕೇಂದ್ರ ಸರಕಾರವು ಅನುದಾನದಲ್ಲಿ ಉತ್ತರ ಭಾರತಕ್ಕೆ ನೀಡುತ್ತಿರುವ ಪ್ರಾಧಾನ್ಯತೆಯನ್ನು ದಕ್ಷಿಣ ಭಾರತೀಯರಾದ ಕರ್ನಾಟಕಕ್ಕೆ ತೆರಿಗೆ ಹಣದ ಅನುದಾನವನ್ನು ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ.
ಇದನ್ನು ಖಂಡಿಸಿ ಇಂದು ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ.ಇದನ್ನು ಪ್ರಶ್ನಿಸಿ ಇತ್ತೀಚೆಗೆ ಸಂಸದರಾದ ಡಿ.ಕೆ.ಸುರೇಶ್ ಅವರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ಅವರನ್ನು ದೇಶದ್ರೋಹಿ ಪಟ್ಟ ಕಟ್ಟಲು ಬಿಜೆಪಿಗರು ಮುಂದಾಗಿರುವ ಖಂಡನಾರ್ಹ. ಇದಕ್ಕೆ ನಾವು ಜಗ್ಗುವುದಿಲ್ಲ.ನಮ್ಮ ರಾಜ್ಯದಿಂದ ಕೇಂದ್ರಕ್ಕೆ 6:7 ಲಕ್ಷ ಕೋಟಿ ರೂಪಾಯಿ ತೆರಿಗೆ ಹಣ ಕಟ್ಟುತ್ತಿದ್ದೇವೆ. ಆದರೆ ಕೇಂದ್ರ ಸರಕಾರವು ಕೇವಲ 37 ಸಾವಿರ ಕೋಟಿ ರೂಪಾಯಿ ಹಣವನ್ನು ಮಾತ್ರ ಕರ್ನಾಟಕಕ್ಕೆ ನೀಡುತ್ತಿದೆ.
ಇದು ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದು ನಮ್ಮ ನಾಯಕರ ಸಲಹೆ ಸೂಚನೆ ಮೇರೆಗೆ ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಅಜೆಂಡಾದಡಿಯಲ್ಲಿ ಇಂದು ಪ್ರತಿಭಟನೆ ನಡೆಸುತ್ತಿರುವುದಾಗಿ ಗುರುಪ್ರಸಾದ್ ತಿಳಿಸಿದರು.ಮಾಗಡಿ ಯೂತ್ ಕಾಂಗ್ರೆಸ್ ಅದ್ಯಕ್ಷ ಕುದೂರು ವಿನಯ್ ಗೌಡ ಮಾತನಾಡಿ ಕರ್ನಾಟಕದಿಂದ ತೆರಿಗೆ ರೂಪದಲ್ಲಿ ನಾವು ನೂರು ರೂಪಾಯಿ ನೀಡಿದರೆ ಅವರು ಕೇವಲ ಮೂವತ್ತೇಳು ರೂಪಾಯಿ ನೀಡುತ್ತಿದ್ದಾರೆ.
ಆದರೆ ಉತ್ತರ ಪ್ರದೇಶ,ಮಧ್ಯಪ್ರದೇಶ, ಬಿಹಾರ ರಾಜ್ಯದವರು 100 ರೂ ತೆರಿಗೆ ಪಾವತಿಸಿದರೆ ಆ ರಾಜ್ಯಗಳಿಗೆ 900 ರೂ ನೀಡುತ್ತಿದೆ. ನಾವು ಕಟ್ಟುವ ತೆರಿಗೆಯನ್ನು ಉತ್ತರ ಭಾರತದವರಿಗೆ ನೀಡುತ್ತಿರುವುದು ಖಂಡನಾರ್ಹ ಹಾಗೂ ತಾರತಮ್ಯವಾಗಿದೆ. ಇದನ್ನು ಖಂಡಿಸಿ ದೆಹಲಿಯ ಜಂತರ್ ಮಂಥರ್ನಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಐತಿಹಾಸಿಕ ಪ್ರತಿಭಟನೆ ನಡೆಯುತ್ತಿದ್ದು ಇದಕ್ಕೆ ಕೇಂದ್ರ ಸರ್ಕಾರವು ಸ್ಪಂದಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ವಿನಯ್ ಎಚ್ಚರಿಕೆ ನೀಡಿದರು.
ಬಿಡದಿ ಯೂತ್ ಕಾಂಗ್ರೆಸ್ ಅದ್ಯಕ್ಷ ಜ್ಯೋತಿಪಾಳ್ಯ ಪ್ರವೀಣ್ ಮಾತನಾಡಿ ಕಳೆದೆರಡು ತಿಂಗಳ ಹಿಂದೆ ರಾಜ್ಯದಲ್ಲಿ ಬರ ಆವರಿಸಿದ ಹಿನ್ನೆಲೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಮಾನ್ಯ ಪ್ರಧಾನ ಮಂತ್ರಿಗಳನ್ನು ಭೇಟಿಮಾಡಿ ಕರ್ನಾಟಕದಲ್ಲಿ ಬರದಿಂದ ರೈತರು ತತ್ತರಿಸುತ್ತಿದ್ದಾರೆ. ನಮಗೆ ಬರಕ್ಕೆ ಸಂಬಂಧಿಸಿದಂತೆ ಹಣ ನೀಡಬೇಕು ಎಂದು ವಿನಂತಿಸಿದ್ದರು.ಆದರೆ ಕೇಂದ್ರದಿಂದ ಯಾವುದೇ ರೀತಿಯ ವಿಶೇಷ ಅನುದಾನ ನೀಡಲಿಲ್ಲ.
ಇದೀಗ ಕೇಂದ್ರ ಬಜೆಟ್ಟಿನಲ್ಲಿ ನಾವು ಕಟ್ಟುವ ತೆರಿಗೆ ಹಣವನ್ನು ನೀಡದೇ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ.ಕೇವಲ ಮತ ಗಳಿಕೆಗೆ ಉತ್ತರ ಭಾರತದವರಿಗೆ ಅವರೂ ಕೇಳದಿದ್ದರೂ ಹೆಚ್ಚಿನ ಹಣ ನೀಡುತ್ತಿದ್ದಾರೆ. ಈ ರಾಜ್ಯದ ಜನತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರವೀಣ್ ವಿವರಿಸಿದರು.
ಪುರಸಭಾ ಸದಸ್ಯರಾದ ಹೆಚ್.ಜೆ.ಪುರುಷೋತ್ತಮ್, ಆಶಾಪ್ರವೀಣ್, ಕೈ ಯುವ ಮುಖಂಡರಾದ ಕಲ್ಯಾಗೇಟ್ ನವೀನ್, ಬಸವೇನಹಳ್ಳಿ ಸುರೇಶ್ ಹರೀಶ್, ಅಬೀದ್ ಪಾಷ, ಮೂರ್ತಿ, ಸುರೇಶ್, ಅಲ್ಲುಅಬೀದ್, ಗುರುರಾಜು, ದೇವರಾಜು, ಸುರೇಶ್ ಸೇರಿದಂತೆ ಮತ್ತಿತರಿದ್ದರು.