ಬೆಂಗಳೂರು: ಕರ್ನಾಟಕದ ಖ್ಯಾತ ಉದ್ಯಮಿ ತಿಮ್ಮೇಗೌಡ ಅವರ ಪುತ್ರಿ ಸುನೀತಾ ತಿಮ್ಮೇಗೌಡ ಹಾಗೂ ಅವರ ಕುಟುಂಬ, ತಿರುಪತಿ ವೆಂಕಟೇಶ್ವರ ದೇವರ ಸನ್ನಿಧಾನದಲ್ಲಿ ನಡೆದ ವೈಭವ ವೈಕುಂಠ ಏಕಾದಶಿ ಹಾಗೂ ಹೊಸ ವರ್ಷದ ಮೊದಲ ದಿನದಂದು ಹೂವಿನ ಅಲಂಕಾರವನ್ನು ಮಾಡಿಸಿದೆ. ತಿರುಪತಿಯಲ್ಲಿ ಒಟ್ಟು 10 ದಿನಗಳ ಕಾಲ ವೈಕುಂಠ ಏಕಾದಶಿ ನಡೆದಿದ್ದು.
ಅದರಲ್ಲಿ ಕೊನೆಯ ನಾಲ್ಕು ದಿನ ದೇಗುಲದ ಇಡೀ ಆವರಣಕ್ಕೆ ಹೂವಿನ ಅಲಂಕಾರ ಮಾಡುವ ಅವಕಾಶ ಸುನೀತಾ ತಿಮ್ಮೇಗೌಡ ಅವರ ಕುಟುಂಬಕ್ಕೆ ಲಭಿಸಿತ್ತು.ಸುನೀತಾ ತಿಮ್ಮೇಗೌಡ ಅವರೇ ಮುಂದಾಳತ್ವ ವಹಿಸಿಕೊಂಡು ತಿರುಪತಿ ವೆಂಕಟೇಶ್ವರ ದೇಗುಲದ ಆವರಣಕ್ಕೆ ಹೂವಿನ ಅಲಂಕಾರ ಮಾಡಿಸಿದ್ದಾರೆ.
ಅದಕ್ಕಾಗಿ ಅವರು ಸೇರಿದಂತೆ ವಿನ್ಯಾಸಕಾರರು ನಾಲ್ಕು ದಿನಗಳಿಗೂ ಹೆಚ್ಚು ಕಾಲ ಸಿದ್ಧತೆಗಳನ್ನು ನಡೆಸಿಕೊಂಡಿದ್ದಾರೆ. ಬೃಹತ್ ದೇಗುಲಕ್ಕೆ ಹೂವಿನ ಅಲಂಕಾರ ಮಾಡುವುದು ಸುನೀತಾ ಅವರ ಕುಟುಂಬಕ್ಕೆ ಸವಾಲಿನ ಸಂಗತಿಯಾಗಿತ್ತು. ಆದರೆ, ಹೂವಿನ ಆಯ್ಕೆಯಿಂದ ಹಿಡಿದು, ಅರಳಿಸುವುದು ಹಾಗೂ ಅಲಂಕಾರ ಮಾಡುವ ತನಕ ಎಲ್ಲವೂ ಸಾಂಗವಾಗಿ ನಡೆದಿದೆ.
ವಿದೇಶಗಳಿಂದ ಆಮದು ಮಾಡಿಕೊಂಡಿರುವ 3 ಟನ್ ಹೂವುಗಳು ಹಾಗೂ ಸ್ಥಳೀಯವಾಗಿ ಲಭ್ಯವಿರುವ 5 ಟನ್ ಹೂವುಗಳು ಸೇರಿದಂತೆ ಒಟ್ಟು 8ಟನ್ ಹೂವುಗಳನ್ನು ಅಲಂಕಾರಕ್ಕೆ ಬಳಸಿಕೊಳ್ಳ ಲಾಗಿದೆ. ಇದರಲ್ಲಿ 100ಕ್ಕೂ ಹೆಚ್ಚು ಅಧಿಕ ಜಾತಿಯ ಹೂವುಗಳು ಇದ್ದವು. ಎಲ್ಲ ಹೂವುಗಳನ್ನು ಕರ್ನಾಟಕದಿಂದಲೇ ಕೊಂಡೊಯ್ಯಲಾಗಿದೆ.
ವಿದೇಶದಿಂದ ಬಂದಿರುವ ಹೂವುಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೊ ವಿಭಾಗ ದಿಂದ 4 ಏರ್ ಕಂಡೀಷನರ್ ಕಂಟೇನರ್ ಬಳಸಿ ತಿರುಪತಿಗೆ ಸಾಗಿಸಲಾಗಿದೆ. ಎಳೆ ತೆಂಗಿನಗರಿಯನ್ನು ಬಳಸಿಕೊಂಡು ಈ ಹೂವುಗಳನ್ನು ದೇಗುಲದ ಆವರಣಗಳಿಗೆ ಅಲಂಕಾರ ಮಾಡಿಸಲಾಗಿದೆ. ಕರ್ನಾಟಕದ 200 ಹಾಗೂ ಆಂಧ್ರಪ್ರದೇಶದ 120 ವಿನ್ಯಾಸಕಾರರು ಸೇರಿ ಒಟ್ಟು 320 ಮಂದಿ ಹೂವಿನ ಅಲಂಕಾರ ಮಾಡಿದ್ದಾರೆ.
ಸುನೀತಾ ತಿಮ್ಮೇಗೌಡ ಅವರ ಪತಿ ಅಶೋಕ್ ಶಂಕರ್, ಅವರ ತಂದೆ, ಈಡಿಗರ ಸಂಘದ ಅಧ್ಯಕ್ಷ ಹಾಗೂ ಸುಧಾ ಬ್ಯಾಂಕ್ ಛೇರ್ಮೆನ್ ತಿಮ್ಮೇಗೌಡ ಹಾಗೂ ಕುಟುಂಬದ ಸದಸ್ಯರು ಈ ಅವಧಿಯಲ್ಲಿ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.ಇದು ಜೀವನದ ಅತ್ಯಂತ ಸಾರ್ಥಕ ಕ್ಷಣ. ದೇವರಿಗೆ ಹೂವಿನ ಸೇವೆ ಮಾಡುವ ಮೂಲಕ ಸಂಪ್ರೀತನಾಗಿದ್ದೇನೆ ಎಂದು ಉದ್ಯಮಿ ಸುನೀತಾ ತಿಮ್ಮೇಗೌಡ ಅವರು ಹೇಳಿದ್ದಾರೆ.