ಹೊಸಕೋಟೆ: ದೇಶದಲ್ಲಿ ನಮ್ಮ ಪೂರ್ವಿಕರು ಹುಟ್ಟುಹಾಕಿದ ಜಾನಪದ ಕಲೆಗಳನ್ನ ಉಳಿಸಿ ಬೆಳೆಸಬೇಕಾದ್ದು ಗ್ರಾಮೀಣ ಪ್ರದೇಶದ ಜನರ ಆದ್ಯ ಕರ್ತವ್ಯವಾಗಿದೆ ಎಂದು ತಾಲೂಕಿನ ಗಣಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್ಲಪ್ಪ ಹೇಳಿದರು.
ಅವರು ತಾಲೂಕಿನ ಗಡಿಭಾಗವಾದ ಗುಂಡೂರು ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಜೀವ್ಗಾಂಧಿ ಯುವಕರ ಸಾಂಸ್ಕøತಿಕ ಕಲಾ ಸಂಘ ಮತ್ತು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಏರ್ಪಡಿಸಿದ್ದ ಗಡಿನಾಡು ಸಾಂಸ್ಕøತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಸಹಸ್ರಾರು ಜಾನಪದ ಕಲೆಗಳು ಅಸ್ತಿತ್ವದಲ್ಲಿದ್ದಾಗ್ಯೂ ಸಹ ಇಂದಿನ ಜೀವನಶೈಲಿ ಬದಲಾವಣೆ, ನಗರೀಕರಣದ ಪ್ರಭಾವ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿರುವುದು ಹಾಗೂ ಅತಿಯಾದ ದೂರದರ್ಶನ, ಸಾಮಾಜಿಕ ಜಾಲತಾಣಗಳ ಆಕರ್ಷಣೆಯಿಂದಾಗಿ ಬೆಳವಣಿಗೆ ಕುಂಠಿತಗೊಂಡಿರುವುದು ವಿಷಾದನೀಯ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇವುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುವಕರಲ್ಲಿ ಆಸಕ್ತಿ ಮೂಡಿಸಬೇಕಾದ್ದು ಅತ್ಯವಶ್ಯವಾಗಿದೆ. ಈ ದಿಶೆಯಲ್ಲಿ ಕಲೆ ಮತ್ತು ಸಂಸ್ಕøತಿಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ.ಪ್ರದೇಶವಾರು ವಿವಿಧ ಸಮುದಾಯಗಳು ವಿಶೇಷ ಸಾಂಸ್ಕೃತಿಕ ಕಲೆಗಳನ್ನು ಅಭ್ಯಾಸ ಮಾಡಿಕೊಂಡಿದ್ದು ಅನೇಕ ಪ್ರದೇಶಗಳಲ್ಲಿ ಜೀವಂತವಾಗಿರುವ ಕಲೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಗಮನಹರಿಸಬೇಕು.
ಈ ನಿಟ್ಟಿನಲ್ಲಿ ಕಲಾ ಪೋಷಕರು ಜವಾಬ್ದಾರಿಯುತ ಪಾತ್ರ ನಿರ್ವಹಿಸಿ ಸಾಂಸ್ಕೃತಿಕ ಕಲೆಗಳ ಪರಿಚಯ ಮಾಡಬೇಕು. ಭಾರತದಲ್ಲಿಯೇ ಪ್ರಸ್ತುತಿಯಲ್ಲಿದ್ದ ಸಾವಿರಾರು ಸಾಂಸ್ಕೃತಿಕ ಕಲೆಗಳಿಗೆ ಮರುಜನ್ಮ ನೀಡುವ ಕೆಲಸವನ್ನು ಜನರು ಸದಾ ಕಾಲ ಮಾಡಿ ನಶಿಸಿಹೋಗದಂತೆ ಎಚ್ಚರವಹಿಸಬೇಕು. ಇದರಿಂದ ಮಾತ್ರ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗಲಿದೆ ಎಂದರು.
ಗಡಿನಾಡು ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸುಗಮ ಸಂಗೀತ, ಸಮೃತ್ಯ ಜಾನಪದ ನೃತ್ಯ, ಕಂಸಾಳೆ, ಕೋಲಾಟ, ರಂಗಗೀತೆ, ಕನ್ನಡ ಗೀತೆ, ಭರತನಾಟ್ಯ, ಶಿವ ತಾಂಡವ ನೃತ್ಯ ನಡೆಯಿತು.ಯಲ್ಲರೆಡ್ಡಿ, ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಧನಲಕ್ಷ್ಮಿ, ಶೇಖರ್, ಕಲಾವಿದ ಎಚ್ ಕೃಷ್ಣಪ್ಪ, ದೇವರಾಜ್, ಅಶ್ವಿನಿ, ಪ್ರಕಾಶ್, ಮೂರ್ತಿ, ರಾಜೀವ್ಗಾಂಧಿ ಯುವಕರ ಸಾಂಸ್ಕøತಿಕ ಕಲಾ ಸಂಘದ ಕಾರ್ಯದರ್ಶಿ ಗೋವಿಂದರಾಜ್, ಡಿ.ವಿ.ಭಾರತಿ ಇನ್ನಿತರರು ಭಾಗವಹಿಸಿದ್ದರು.