ಬೆಂಗಳೂರು: ರಾಜಧಾನಿ ಬೆಂಗಳೂರು, ಗ್ರಾಮಾಂತರ, ರಾಮನಗರ,ಮಂಡ್ಯ, ವಿಜಯನಗರ ಸೇರಿ ರಾಜ್ಯಾದ್ಯಂತ 10ಕ್ಕೂ ಹೆಚ್ಚು ಕಡೆಗಳಲ್ಲಿ ಇಂದು ಮುಂಜಾನೆಯಿಂದ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಚೀಫ್ ಜನರಲ್ ಮ್ಯಾನೇಜರ್ ಎಂಎಲ್ ನಾಗರಾಜ್, ಪಿಡಿಓ ಡಿಎಂ ಪದ್ಮನಾಭ, ಸೂಪರಿಂಟೆಂಡೆಂಟ್ ಇಂಜಿನಿಯರ್ ಎನ್. ಸತೀಶ್ ಬಾಬು, ಕೆಆರ್ಐಡಿಎಲ್ ಎಇಇ ಸೈಯದ್ ಮುನೀರ್ ಅಹ್ಮದ್ ಅವರ ಕಚೇರಿ ಮನೆಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಹಚ್ಚಿದ್ದಾರೆ.
ರಾಮನಗರದಲ್ಲಿ ಚನ್ನೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಹೆಚ್ಎಸ್ ಸುರೇಶ್, ನಗರ ಯೋಜನೆ ಸದಸ್ಯ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ ಮಂಜೇಶ್ ಬಿ. ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಗ್ರಾ.ಪಂ ಸದಸ್ಯ ಸುರೇಶ್ ಮೇಲೆ ಹಲವು ದೂರು ಬಂದ ಹಿನ್ನೆಲೆಯಲ್ಲಿ ದಕ್ಷಿಣ ತಾಲೂಕಿನ ಸೀಗೆಹಳ್ಳಿ ಮನೆ ಮೇಲೆ ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ನಾಗರಾಜ್ ಕೆಲ ದಿನಗಳ ಹಿಂದೆ 7.50 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ವಿಜಯನಗರದಲ್ಲಿ ಜೆಸ್ಕಾಂ ಜನರಲ್ ಮ್ಯಾನೇಜರ್ ಆಗಿರುವ ನಾಗರಾಜ್ ಬೆಂಗಳೂರಿನಲ್ಲೂ ಮನೆ ಹೊಂದಿದ್ದು, ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಾಪೂಜಿ ನಗರದ ಬಸವೇಶ್ವರ ದೇಗುಲ ಹಿಂಭಾಗದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ.ದಾಳಿ ವೇಳೆ ಹಲವರ ಮನೆಯಲ್ಲಿ ಅಪಾರ ಮೊತ್ತದ ನಗದು ಚಿನ್ನಾಭರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.