ಹುಬ್ಬಳ್ಳಿ: ಕಾನೂನು ಸುವ್ಯವಸ್ಥೆ ಕಾಪಾಡೋಕೆ ಆಗಲ್ಲ ಅಂದ್ರೆ ಜಾಗ ಖಾಲಿ ಮಾಡಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಸವರಾಜ ಬೊಮ್ಮಾಯಿ, ಅಂಜಲಿ ಕೊಲೆ ಆಘಾತಕಾರಿ ಬೆಳವಣಿಗೆ. ಆರೋಪಗಳಿಗೆ ಕಾನೂನಿನ ಭಯವು ಇಲ್ಲ, ಪೊಲೀಸರ ಭಯವೂ ಇಲ್ಲ. ಏನು ಮಾಡಿದರೂ ನಡೆಯುತ್ತೆ ಅನ್ನೋ ಭಾವನೆ ಮೂಡಿದೆ ಎಂದಿದ್ದಾರೆ.
ನೇಹಾ ಪ್ರಕರಣ ನಡೆದ ನಂತರವೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಸಿಎಂ ಸೇರಿ ಇತರ ನಾಯಕರು ದೊಡ್ಡ ದೊಡ್ಡ ಮಾತುಗಳನ್ನಾಡಿದರು. ಏನೂ ಮಾಡದೆ ಇರೋ ಪರಿಣಾಮ ಈ ಹತ್ಯೆ ನಡೆದಿದೆ. ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಪೊಲೀಸರೇ ಪರೋಕ್ಷವಾಗಿ ಆರೋಪಿಗೆ ಕೊಲೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿದ್ದಾರೆ.
ಪೊಲೀಸ್ ಠಾಣೆಗಳು ಇರುವುದಾದರೂ ಯಾಕೆ…? ಎಂದು ಪ್ರಶ್ನಿಸಿರುವ ಅವರು, ವಿರೋಧ ಪಕ್ಷದವರು ಹೇಳಿಕೆ ಕೊಟ್ಟರೆ ರಾಜಕೀಯ ಅಂತಾರೆ. ಇಷ್ಟೆಲ್ಲಾ ಕೊಲೆ ನಡೆದರೂ ನಾವು ಬಾಯಿ ಮುಚ್ಕೊಂಡು ಕೂಡಬೇಕೇ..? ನೀವು ರಾಜಕಾರಣವನ್ನಾದರೂ ಅನ್ನಿ, ಮಹಾರಾಜಕಾರಣವನ್ನಾದ್ರೂ ಅನ್ನಿ. ನಿಮ್ಮ ಕೈಯಲ್ಲಿ ಕಾನೂನು ಕಾಪಾಡಲು ಆಗೋಲ್ಲ ಅಂದ್ರೆ ಕೂಡಲೇ ಜಾಗ ಖಾಲಿ ಮಾಡಿ ಎಂದು ಗುಡುಗಿದ್ದಾರೆ.
ಸಂವೇದನಾಶೀಲ ಸರ್ಕಾರ ಬೇಕಲ್ಲವೇ..? ಪೊಲೀಸರ ಅಮಾನತಿನಿಂದ ಈ ಪ್ರಕರಣಕ್ಕೆ ನ್ಯಾಯ ಸಿಗುತ್ತೆಯೇ..? ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ರಚನೆ ಮಾಡಬೇಕು. ಆರೋಪಿಯನ್ನು ಪತ್ತೆ ಹಚ್ಚಿ ಒದ್ದು ಒಳಗೆ ಹಾಕಿ, ಗಲ್ಲು ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಿ. ನಮ್ಮ ಹೋರಾಟವನ್ನು ಇಲ್ಲಿಗೆ ಕೈ ಬಿಡಲ್ಲ. ಇದೇ ರೀತಿ ಕೊಲೆ ಪ್ರಕರಣ ನಡೆದರೆ ಜನವೇ ಸರ್ಕಾರದ ವಿರುದ್ಧ ತಿರುಗಿ ಬೀಳ್ತಾರೆ. ಅಂಜಲಿ ಕುಟುಂಬಸ್ಥರಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.