ಅಮರಾವತಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಅವರು, ಆಂಧ್ರ ಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ ಸಮ್ಮುಖದಲ್ಲಿ ಅಂಬಟಿ ತಿರುಪತಿ ರಾಯುಡು ವೈಎಸ್ಆರ್ಸಿಪಿ ಸೇರಿದ್ದಾರೆ ಎಂದು ಪಕ್ಷವು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ. ಉಪ ಮುಖ್ಯಮಂತ್ರಿ ಕೆ. ನಾರಾಯಣ ಸ್ವಾಮಿ ಮತ್ತು ರಾಜಂಪೇಟೆ ಸಂಸದ ಆರ್. ಮಿಥುನ್ ರೆಡ್ಡಿ ಈ ಸಂದರ್ಭ ಉಪಸ್ಥಿತರಿದ್ದರು. ಪಕ್ಷದ ಶಾಲು ಹೊದಿಸುವ ಮೂಲಕ ಜಗನ್, ರಾಯುಡು ಅವರನ್ನು ಬರಮಾಡಿಕೊಂಡರು.
ಭಾರತ ಕ್ರಿಕೆಟ್ ತಂಡದಲ್ಲಿ ಆಡಿರುವ ರಾಯುಡು, ಐಪಿಎಲ್ನಲ್ಲೂ ಛಾಪು ಮೂಡಿಸಿದ್ದರು.ಭಾರತ ತಂಡದ ಪರ 55 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ರಾಯುಡು, 3 ಶತಕ ಮತ್ತು 10 ಅರ್ಧಶತಕ ಸೇರಿ 1694 ರನ್ ಗಳಿಸಿದ್ದಾರೆ. 6 ಟಿ-20 ಪಂದ್ಯಗಳನ್ನೂ ಆಡಿದ್ದಾರೆ.