ಮಾಗಡಿ: ಈ ತಾಲ್ಲೂಕಿನ ಸಜ್ಜನ ಬಂಧುಗಳು ನಮ್ಮ ಮನೆತನವಾದ ಹುಲೀಕಟ್ಟೆ ಮನೆಯ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ನಾನು ಸದಾಕಾಲವೂ ಋಣಿಯಾಗಿರುವುದಾಗಿ ಮಾಜಿ ಶಾಸಕರಾದ ಎಚ್. ಸಿ. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ನೇರಳೇಕೆರೆ ಗ್ರಾಮದಲ್ಲಿ ತಮ್ಮ ಜನುಮದಿನದ ನಿಮಿತ್ತವಾಗಿ ಅವರ ಮನೆ ದೇವರಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳಿಂದ ಬೆಳ್ಳಿಗದೆ, ಹಾಗೂ ರೇಷ್ಮೆಹಾರದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಮ್ಮ ಕುಟುಂಬವು ಈ ತಾಲ್ಲೂಕಿನಲ್ಲಿ ರಾಜಕೀಯವಾಗಿ ಸಹಕಾರ ಶೈಕ್ಷಣಿಕ ಸಾಮಾಜಿಕ ಆದ್ಯಾತ್ಮಿಕ ಕ್ರೀಡೆ ಸೇರಿದಂತೆ ಇನ್ನಿತರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ ಇದಕ್ಕೆ ತಾಲ್ಲೂಕಿನ ಜನರ ಕೃಪಾಶೀರ್ವಾದ ಕಾರಣವಾಗಿದೆ. ನಮ್ಮ ತಂದೆ ಚನ್ನಪ್ಪನವರು ಶಾಸಕರಾಗಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ನಾನು ನಾಲ್ಕು ಭಾರಿ ಶಾಸಕನಾಗಲು ಆಶೀರ್ವದಿಸಿರುವ ಜನತೆಗೆ ಸದಾಕಾಲವೂ ಅಭಾರಿಯಾಗಿರುತ್ತೇನೆ ಎಂದು ತಿಳಿಸಿದರು.
ನಾನು ನಾಲ್ಕು ಭಾರಿ ಶಾಸಕನಾಗಿ ಸಾಕಷ್ಟು ಗುರುತರವಾದ ಶಾಶ್ವತ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇನೆ. ಆದರೆ ನಾನು ಶಾಸಕನಾಗಿದ್ದಾಗಲೆಲ್ಲಾ ವಿರೋದ ಪಕ್ಷ ಬಂದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಸಾದ್ಯವಾಗಲಿಲ್ಲ. ಈ ಭಾರಿ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರಲು ಆಶೀರ್ವದಿಸಿದರೆ ಹೇಮಾವತಿ ನದಿ ನೀರನ್ನು ಮಾಗಡಿಯ ಕೆರೆ ಕಟ್ಟೆಗಳಿಗೆ ತುಂಬಿಸುವ ಜೊತೆಗೆ ಸತ್ಯಾಗಾಲದಿಂದಲೂ ಕಣ್ವ ಕೆರೆಯ ಮುಖೇನ ವೈಜಿ ಗುಡ್ಡ ಮಂಚನಬೆಲೆ ಜಲಾಶಯಕ್ಕೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ. ಅಲ್ಲದೇ ಕಲ್ಯಾಕೆರೆ ಕೆಂಪಸಾಗರ ಕೆರೆಗೂ ನೀರು ತುಂಬಿಸುವ ಚಿಂತನೆಯಿದೆ.
ವಿರೋಧ ಪಕ್ಷದ ಶಾಸಕರಾದರೆ ಆಡಳಿತ ನಡೆಸುವ ಪಕ್ಷವು ಮೂಗಿಗೆ ತುಪ್ಪ ಸವರುವ ಕೆಲಸವಾಗುತ್ತದೆ. ಇಂದು ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ಅವರ ಪಕ್ಷದ ಶಾಸಕರಿಗೆ ಅವರ ಕ್ಷೇತ್ರಾಭಿವೃದ್ದಿಗೆ ನೂರು ಕೋಟಿ ಅನುದಾನ ನೀಡಿದರೆ ವಿರೋಧ ಪಕ್ಷದ ಶಾಸಕರಿಗೆ ಕೇವಲ ಇಪ್ಪತ್ತು ಕೋಟಿ ರೂ ಅನುಧಾನ ನೀಡುತ್ತದೆ. ಆದ ಕಾರಣವಾಗಿ ಅದಿಕಾರಕ್ಕೆ ಬರುವ ಕಾಂಗ್ರೆಸ್ ಪಕ್ಷಕ್ಕೆ ಈ ರಾಜ್ಯದ ಜನತೆ ಈ ಭಾರಿ ಆಶೀರ್ವದಿಸಲಿದ್ದು ಈ ಕ್ಷೇತ್ರದ ಸ್ಪರ್ದಾಳುವಾದ ನನಗೆ ಈ ತಾಲ್ಲೂಕಿನ ಪ್ರಭುದ್ದ ಮತದಾರರು ಆಶೀರ್ವದಿಸಿದರೆ ನಿರೀಕ್ಷೆಗೂ ಮೀರಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡರಾದ ನೇರಳೇಕೆರೆ ಗಂಗಾಧರಣ್ಣ ಮಾತನಾಡಿ ನಮ್ಮ ನಾಯಕರಾದ ಬಾಲಕೃಷ್ಣ ಅವರು ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದರೂ ದೃತಿಗೆಡದೇ ಸೋಲಿನ ಹತಾಶೆಯಿಂದ ಮನೆಯಲ್ಲಿ ಕೂರದೇ ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ ಈ ಕ್ಷೇತ್ರದ ಸಾಮಾನ್ಯ ಜನರ ಋಣ ತೀರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಅವರಲ್ಲೂ ಕರೋನಾ ಮಹಾಮಾರಿ ಆವರಿಸಿದ್ದ ಸಂದರ್ಭದಲ್ಲಿ ವಿಶೇಷವಾಗಿ ಲಾಕ್ ಡೌನ್ ಆಗಿದ್ದ ಸಂದರ್ಭದಲ್ಲಿ ತಮ್ಮ ಶ್ರೀಮತಿಯವರಾದ ರಾಧಾ ಬಾಲಕೃಷ್ಣ ಅವರನ್ನೊಡಗೂಡಿ ಪಟ್ಟಣದ ಸೋಮೇಶ್ವರ ದೇವಾಲಯದ ಮುಂದೆ ಪತ್ರಿಕಾಗೋಷ್ಠಿ ನಡೆಸಿ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನಂತರ ತಾಲ್ಲೂಕಿನ ತಮ್ಮದೇ ಆದಂತಹ ತಂಡ ರಚಿಸಿ ಬಡವರು ದೀನ ದಲಿತರು ನಿರ್ಗತಿಕರು ರೈತರು ಸೇರಿದಂತೆ ಇನ್ನಿತರರಿಗೆ ತಮ್ಮ ಶಕ್ತಿಮೀರಿ ಸೇವೆ ಮಾಡಿದರು.
”ವಿಶೇಷವಾಗಿ ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ಮಾಗಡಿ ಸರಕಾರಿ ಆಸ್ಪತ್ರೆಗೆ ಉಚಿತ ಆಂಬಲೆನ್ಸ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ”ತಾನು ಸೋತರೂ ಈ ಕ್ಷೇತ್ರದ ಜನರ ಸೇವೆಯಲ್ಲಿ ನಿರತರಾಗಿರುವ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡಲು ನಮ್ಮ ಗ್ರಾಮ ಸೇರಿದಂತೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಾಲಕೃಷ್ಣ ಅವರ ಗೆಲುವಿಗೆ ಹಗಲಿರುಳು ಶ್ರಮಿಸಲಾಗುವುದು ಎಂದು ಗಂಗಾಧರಣ್ಣ ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಕಲ್ಕೆರೆ ಧನಂಜಯ, ತಾಪಂ ಮಾಜಿ ಅಧ್ಯಕ್ಷರಾದ ಕೋಡಿಪಾಳ್ಯ ಶಿವರಾಜು, ಮಣಿಗನಹಳ್ಳಿ ಸುರೇಶ್, ಕೈ
ಮುಖಂಡರಾದ ಗಂಗೋನಹಳ್ಳಿ ಶ್ರೀನಿವಾಸ ಮೂರ್ತಿ, ಹೊನ್ನಪುರ ಶಿವಪ್ರಸಾದ್, ವೇಣು ಗೋಪಾಲ್, ಚಿಕ್ಕಕಲ್ಯಾ ನಾರಾಯಣಗೌಡ, ಗಜೇಂದ್ರ, ರಾಜಣ್ಣ, ಕೋಡಿಪಾಳ್ಯ ರವಿಕುಮಾರ್, ಜಾನಿಗೆರೆ ರವೀಶ್, ಗೀತಾ ರಂಗನಾಥ್, ಅಭಿಷೇಕ್, ಶಿವಣ್ಣ, ರಾಮಣ್ಣ, ಲೋಕೇಶ್ ಸೇರಿದಂತೆ ಮತ್ತಿತರಿದ್ದರು.
Leave a Review