ಚಿಕ್ಕಬಳ್ಳಾಪುರ: ಹಿರಿಯ ಸಹಕಾರಿ ಧುರೀಣರು ಮಾಜಿ ಶಾಸಕರಾಗಿದ್ದ ಕೆ. ಬಿ. ಪಿಳ್ಳಪ್ಪ ಅವರ ಪುತ್ರ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಥಮ ಶಾಸಕ ಕೆ. ಪಿ. ಬಚ್ಚೇಗೌಡ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಬೆಂಗಳೂರಿನ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಅಪಾರ ಬೆಂಬಲಿಗರೊಂದಿಗೆ ಭಾನುವಾರ ಕಾಂಗ್ರೆಸ್ಗೆ ಸೇರ್ಪಡೆ ಆಗುವ ಮೂಲಕ ಎರಡು ದಶಗಳ ಜೆಡಿಎಸ್ ನಂಟಿಗೆ ಕೆ. ಪಿ. ಬಚ್ಚೇಗೌಡರು ವಿದಾಯ ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆಯಾದ ಪ್ರಮುಖರಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಎಂ. ಮುನೇಗೌಡ, ಮಾಜಿ ಜಿಪಂ ಸದಸ್ಯ ರಾಜಾಕಾಂತ್, ಯುವಮುಖಂಡ ಅಂಗರೇಕನಹಳ್ಳಿ ರವಿ, ಮಧು, ಶ್ರೀಧರ್ ಮತ್ತಿತರರು ಇದ್ದಾರೆ.ಬಚ್ಚೇಗೌಡರನ್ನು ಕಾಂಗ್ರೆಸ್ಗೆ ಸೆಳೆಯುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಅಂತೂ ಇಂತೂ ತಾವು ಹಿಡಿದ ಹಟ ಸಾಧಿಸುವ ಮೂಲಕ ಎದುರಾಳಿ ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರ ಮೈತ್ರಿ ಪ್ರೇಮಕ್ಕೆ ಶಾಕ್ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಿನ್ನೆಯಷ್ಟೇ ನಡೆದಿದ್ದ ಬಿಜೆಪಿ ಮುಖಂಡರ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದ ವೇಳೆ ಡಾ. ಕೆ. ಸುಧಾಕರ್ ಅವರು ಜೆಡಿಎಸ್ ಮುಖಂಡರನ್ನು ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಲಾಗುವುದು. ಬರುವವರು ಬರಲಿ, ಬರಲ್ಲ ಎಂದರೆ ಏನೂ ಮಾಡಲಾಗಲ್ಲ ಎಂದು ಹೇಳುವ ಮೂಲಕ ಮುನಿಸಿಕೊಂಡಿದ್ದ ಜೆಡಿಎಸ್ ನಾಯಕರ ಸಿಟ್ಟು ನೆತ್ತಿಗೇರುವಂತೆ ಮಾಡಿದ್ದರು.
ಕಾಂಗ್ರೆಸ್ ಸೇರ್ಪಡೆಗೂ ಮುನ್ನ ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿರುವ ಕೆ. ಪಿ. ಬಚ್ಚೇಗೌಡ ಅವರು ಸುಧಾಕರ್ ಹೇಳಿಕೆಯನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಮೈತ್ರಿ ಧರ್ಮ ಕಾಪಾಡಲು ನಾವು ಸಾಕಷ್ಟು ಕಾದಿದ್ದದೇವೆ. ಬಂದು ಮಾತನಾಡುತ್ತಾರೆ ಎಂದು ಎಣಿಸಿದ್ದೆವು. ಆದರೆ ಈವರೆಗೂ ಯಾರೂ ಬರಲಿಲ್ಲ. ನಮಗೂ ಸ್ವಾಭಿಮಾನ ಇದೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಟಿಕೆಟ್ ದೊರೆತ ಕೂಡಲೇ ನಮ್ಮ ಬಳಿಗೆ ಬಂದು ಆಶೀರ್ವಾದ ಬೇಡಿದ್ದಲ್ಲದೆ, ಪಕ್ಷಕ್ಕೆ ಬರುವಂತೆ ಮನವಿ ಮಾಡಿದರು. ಇದಕ್ಕೂ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಸಿ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಕೂಡ ಈ ವಿಚಾರದಲ್ಲಿ ಮುಕ್ತವಾಗಿ ಮಾತನಾಡಿದ್ದರು. ಹೀಗಾಗಿಯೇ ಕಾಂಗ್ರೆಸ್ ಸೇರ್ಪಡೆ ಆಗಿದ್ದೇವೆ ಎಂದಿದ್ದಾರೆ.
ಶುಕ್ರವಾರ ಜೆಡಿಎಸ್ ಪಕ್ಷದ ಮುಖಂಡರು, ಬೆಂಬಲಿಗರ ಸಭೆ ನಡೆಸಿದ್ದ ಕೆ. ಪಿ. ಬಚ್ಚೇಗೌಡ ಅವರು ಸುಧಾಕರ್ ಅವರಿಗೆ ಬೆಂಬಲ ಕೊಡುವುದೋ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದೋ ಎಂಬ ಬಗ್ಗೆ ಸುಧೀರ್ಘ ಚರ್ಚೆ ನಡೆಸಿಯೇ ಬಹುಮತದ ಆಧಾರದಲ್ಲಿ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಏನೇ ಆಗಲಿ ಕಟ್ಟಾ ಜೆಡಿಎಸ್ ಕುಟುಂಬವಾಗಿದ್ದ ಕೆ. ಪಿ. ಬಚ್ಚೇಗೌಡರು ದಿಢೀರ್ ಬೆಳವಣಿಗೆಯಲ್ಲಿ ಕೈಪಕ್ಷ ಸೇರಿರುವುದು ಕುಮಾರಸ್ವಾಮಿ ಆದಿಯಾಗಿ ಸುಧಾಕರ್ ವರಗೆ ಅಚ್ಚರಿಯ ಬೆಳವಣಿಗೆಯಾಗಿದೆ. ಚುನಾವಣೆಯ ಹೊಸ್ತಿಲಲ್ಲಿ ಈ ಬೆಳವಣಿಗೆ ಬಿಜೆಪಿಗೆ ಬಿಗ್ ಶಾಕ್ ಎಂದರೆ ತಪ್ಪಾಗಲಾರದು. ಮೋದಿ ಅಲೆಯಲ್ಲಿ ಗೆಲುವು ನನ್ನದೇ ಎನ್ನುತ್ತಿರುವ ಡಾ. ಕೆ. ಸುಧಾಕರ್ ಈ ಬೆಳವಣಿಗೆಯನ್ನು ಯಾವ ರೀತಿ ನಿಭಾಯಿಸುತ್ತಾರೋ ಕಾದು ನೋಡಬೇಕಿದೆ.