ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) ವಿಧಿವಶರಾಗಿದ್ದಾರೆ.ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಕ್ಬಾಲ್ ಅಹ್ಮದ್ ಸರಡಗಿ ಅವರು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ಪತ್ನಿ, ಪುತ್ರ ಇರ್ಫಾನ್ ಅಹ್ಮದ್ ಸರಡಗಿ, ಪುತ್ರಿ ಡಾ. ಜಹೇರಾ ಸರಡಗಿ ಅವರನ್ನು ಅಗಲಿದ್ದಾರೆ. ನಗರದ ಐವಾನ್- ಇ-ಶಾಹಿ ಪ್ರದೇಶದಲ್ಲಿರುವ ಸರಡಗಿ ನಿವಾಸದಲ್ಲಿ ಇಂದು ಇಡೀ ದಿನ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ. ಸಂಜೆ 6 ಗಂಟೆ ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತಾಪ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಮೃತರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಅವರ ಸೇವಾ ಕಾರ್ಯವನ್ನು ಸ್ಮರಿಸಿದ್ದಾರೆ.