ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಮಹಿಳೆಯೊಬ್ಬರು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.
ದೂರಿಗೆ ಸಂಬಂಧಪಟ್ಟಂತೆ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.ಆರೋಪದ ವಿಚಾರವಾಗಿ ದಾಖಲಾಗಿರುವ ಎಫ್ಐಆರ್ ಬಗ್ಗೆ ಮಾಜಿ ಸಿಎಂ, ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ನ್ಯಾಯ ಕೊಡಿಸಿ ಎಂದು ಬಂದಿದ್ದ ಅಮ್ಮ, ಮಗಳು ಹಲವು ಸಲ ನನ್ನ ಬಳಿ ಬಂದಿದ್ದರು ಎಂದಿದ್ದಾರೆ.
ತಾಯಿ-ಮಗಳು ಅನೇಕ ಸಲ ಇಲ್ಲಿಗೆ ಬಂದು ಹೋಗಿದ್ದರು. ಅನ್ಯಾಯ ಆಗಿದೆ ಎಂದು ನನ್ನ ಬಳಿ ಬಂದಿದ್ದರು. ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಾದ ಮೇಲೆ ನನ್ನ ವಿರುದ್ಧ ಏನೇನೋ ಮಾತನಾಡಿದರು. ಬಳಿಕ ಅವರನ್ನ ನಗರ ಪೊಲೀಸ್ ಆಯುಕ್ತರ ಬಳಿ ಕಳಿಸಿಕೊಟ್ಟೆ ಎಂದು ಹೇಳಿದ್ದಾರೆ.
ಉಪಕಾರ ಮಾಡಿದರೆ ಈಗ ನನ್ನ ಮೇಲೆಯೇ ಹೀಗೆ ಆರೋಪ ಮಾಡಿದ್ದಾರೆ. ಯಾರೋ ಒಬ್ಬ ಹೆಣ್ಣು ಮಗಳು ದೂರು ಕೊಟ್ಟಿದ್ದಾರೆ. ಇರಲಿ ಎದುರಿಸೋಣ. ನಾನು ಈ ಕುರಿತು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಜಿ ಪರಮೇಶ್ವರ ಕೂಡ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ.
ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ನಿನ್ನೆ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಇದರನ್ನು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನು ಪ್ರಕಾರ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದಿದ್ದಾರೆ. ಇದಕ್ಕೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಗೃಹ ಸಚಿವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.
ಬಳಿಕ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದರು.ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು , ಬಿಸಿನೆಸ್ ಮ್ಯಾನ್ಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದವೇ ಸಂತ್ರಸ್ತ ಬಾಲಕಿಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.