ಕೆ.ಆರ್.ಪೇಟೆ: ನಿಯಮಿತವಾದ ಆಹಾರಪದ್ಧತಿಯನ್ನು ಅನುಸರಿಸಿ ಶಿಸ್ತುಬದ್ಧವಾದ ಜೀವನವನ್ನು ನಡೆಸುವ ಮೂಲಕರೋಗರುಜಿನಗಳು ನಮ್ಮ ಹತ್ತಿರ ಸುಳಿಯದಂತೆ ಎಚ್ಚರವಹಿಸಿ ನೂರ್ಕಾಲ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಚಂದ್ರವನ ಆಶ್ರಮದ ಪೀಠಾಧಿಪತಿ ಡಾ. ತ್ರಿನೇತ್ರ ಮಹಂತ ಶಿವಯೋಗಿಶ್ರೀಗಳು ಕರೆ ನೀಡಿದರು.
ತಾಲ್ಲೂಕಿನ ತೆಂಡೇಕೆರೆ ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ಶತಾಯುಶಿ ಪರಮಪೂಜ್ಯ ಶ್ರೀಮರಿದೇವರುಶಿವಯೋಗಿ ಮಹಾಸ್ವಾಮಿಗಳವರ 130ನೇ ಜಯಂತಿ ಹಾಗೂ ಡಾ. ತ್ರಿನೇತ್ರಮಹಂತಶಿವಯೋಗಿ ಸ್ವಾಮಿಗಳ 25ನೇ ಪಟ್ಟಾಧಿಕಾರದ ಮಹೋತ್ಸವದ ಪ್ರಯುಕ್ತ ರೋಟರಿ ಚಂದ್ರವನ ಶ್ರೀರಂಗಪಟ್ಟಣ, ಮೈಸೂರಿನ ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ತೆಂಡೇಕೆರೆ ಗ್ರಾಮಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ಉಚಿತ ಆಯುರ್ವೇದ ತಪಾಸಣಾ ಮತ್ತು ಮಧುಮೇಹ ಚಿಕಿತ್ಸಾ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ವಿಶ್ವದಲ್ಲಿಯೇ ಯಾವುದೂ ಇಲ್ಲವಾದ್ದರಿಂದ ಜನಸಾಮಾನ್ಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾವಹಿಸಿ ಅಗತ್ಯವಾದ ಮುಂಜಾಗ್ರತ ಕ್ರಮಗಳನ್ನು ಅನುಸರಿಸುವ ಜೊತೆಗೆ ನಿಯಮಿತವಾಗಿ ಆಹಾರ ಸೇವಿಸಿ ಶಿಸ್ತುಬದ್ಧ ಜೀವನವನ್ನು ನಡೆಸಿ ರೋಗರುಜಿನಗಳು ತಮ್ಮ ಹತ್ತಿರಕ್ಕೆ ಬರದಂತೆ ಎಚ್ಚರವಾಗಿರಬೇಕು ಎಂದರು.
ತೆಂಡೇಕೆರೆಯ ಬಾಳೆಹೊನ್ನೂರು ಶಾಖಾಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಇಂದು ನಾಡಿನ ಖ್ಯಾತ ತಜ್ಞವೈದ್ಯರ ನೇತೃತ್ವದಲ್ಲಿ ಉಚಿತವಾಗಿ ನಡೆಯುತ್ತಿರುವ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮೀಣ ಪ್ರದೇಶದ ಜನರು ಸದ್ಭಳಕೆ ಮಾಡಿಕೊಂಡು ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳೋಬೇಕು.
ಮಾತುಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಹಿರಿಯರ ನಾಣ್ಣುಡಿಯಂತೆ ಗ್ರಾಮೀಣ ಜನರು ನಾಲಿಗೆ ಚಪಲಕ್ಕೆ ತುತ್ತಾಗಿ ಮನಸೋಇಚ್ಛೆ ಆರೋಗ್ಯಕ್ಕೆ ಮಾರಕವಾಗುವ ತಿಂಡಿತಿನಿಸುಗಳನ್ನು ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳದೇ ನಿಯಮಿತವಾದ ಆಹಾರ ಪದ್ಧತಿಯನ್ನು ಅನುಸರಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಇಸಿಜಿ ಪರೀಕ್ಷೆಯನ್ನು ಮಾಡಿಸಿ ಕೊಂಡರಲ್ಲದೇ ಪೂಜ್ಯರಾದ ಚಂದ್ರವನಸ್ವಾಮಿಗಳು ತಮ್ಮ 25ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ಆರೋಗ್ಯ ತಪಾಸಣೆ ಮಾಡಿಸಿ ಉಚಿತವಾಗಿ ಔಷಧಗಳನ್ನು ಕೂಡಾ ವಿತರಣೆ ಮಾಡಲು ವ್ಯವಸ್ಥೆ ಮಾಡಿಸಿ ಒಂದು ಚುನಾಯಿತ ಸರ್ಕಾರವು ಮಾಡಲಾಗದ ಕೆಲಸವನ್ನು ಮಾಡಿಕೊಟ್ಟಿದ್ದಾರೆ.
ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ತಾಲೂಕು ಮಟ್ಟದಲ್ಲಿ ನಡೆಯುವಂತಹ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು.ಶಿಬಿರದಲ್ಲಿ ರಕ್ಷಪರೀಕ್ಷೆ, ಇಸಿಜಿ, ಹೃದ್ರೋಗ ತಪಾಸಣೆ, ಜನರಲ್ ಫಿಜಿಷಿಯನ್, ದಂತವೈದ್ಯರ ತಪಾಸಣೆ ನಡೆಸಿ ಯೂತ್ಫಾರ್ ಸೇವಾ ಸಂಸ್ಥೆ ಹಾಗೂ ರೋಟರಿ ಚಂದ್ರವನ ಸಂಸ್ಥೆಯ ವತಿಯಿಂದ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ತೆಂಡೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ನಾಗರತ್ನಗಂಗಾಧರ್, ಪ್ರೌಢಶಾಲಾ ಮುಖ್ಯಶಿಕ್ಷಕ ಮುತ್ತುರಾಜ್, ಹಿರಿಯ ಪ್ರಾಥಮಿಕಶಾಲೆ ಮುಖ್ಯಶಿಕ್ಷಕ ರಾಜು, ಗ್ರಾಮದ ಮುಖಂಡರಾದ ಶಿವಲಿಂಗ, ರವಿಕುಮಾರ, ರಮೇಶ್, ನಾಗೇಶ್, ಟಿ.ಡಿ.ದೊರೆಸ್ವಾಮಿ, ರೋಟರಿ ವಲಯಕಾರ್ಯದರ್ಶಿ ರಾಜೇಶ್, ರೋಟರಿ ಚಂದ್ರವನ ಸಂಸ್ಥೆಯ ಅಧ್ಯಕ್ಷ ಟಿ.ಪಿ.ಶಿವಕುಮಾರ್, ಕಾರ್ಯದರ್ಶಿ ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.