ಗೌರಿಬಿದನೂರು: ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅಂಬ್ಯುಲೆನ್ಸ್ ಕೊರತೆ ಎದುರಾಗಿದ್ದು, ಇರುವ ಆಂಬ್ಯುಲೆನ್ಸ್ಗೂ ಕೂಡ ಜನ ತಾವೇ ಡೀಸೆಲ್ ತುಂಬಿಸಲು ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಎರಡೂವರೆ ಲಕ್ಷ ಜನಸಂಖ್ಯೆಯಿದೆ. ಜನ ಸಂಖ್ಯೆಗೆ ಅನುಗುಣವಾಗಿ ತಾಲೂಕು ಆಸ್ಪತ್ರೆಗೆ ಹೆಚ್ಚುವರಿ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕಿತ್ತು.
ಆದರೆ ಇಲ್ಲಿ ಇರುವುದು 2 ಆಂಬ್ಯುಲೆನ್ಸ್ಗಳು ಮಾತ್ರ. ಒಂದು ಆಂಬ್ಯುಲೆನ್ಸ್ ಅನ್ನು ತಾಯಿ ಮತ್ತು ನಗು ಮಗು(ಹೆರಿಗೆ) ಉದ್ದೇಶಕ್ಕೆ ಮೀಸಲಿಡಲಾಗಿದೆ. ಇನ್ನೊಂದನ್ನು ಸಾಮಾನ್ಯ ರೋಗಿಗಳಿಗೆ ಮೀಸಲಿಡಲಾಗಿದೆ. ಇವುಗಳಿಂದ ಕೂಡ ಹಣ ಸುಲಿಗೆ ಆರೋಪ ಕೇಳಿ ಬರುತ್ತಿದೆ.
*ಡೀಸೆಲ್‍ಗೆ ಹಣ ವಸೂಲಿ*
ಸರಕಾರದ ನಿಯಮಾವಳಿ ಪ್ರಕಾರ ಬಿಪಿಎಲ್ ಕಾರ್ಡ್ದಾರರನ್ನು ಹೊರತುಪಡಿಸಿ ಉಳಿದವರು ಹಣ ಪಾವತಿಸಬೇಕು. ಆದರೆ ಇಲ್ಲಿ ಬಿಪಿಎಲ್ ಕಾರ್ಡ್ದಾರರಿಂದಲೂ ಹಣ ವಸೂಲಿ ಮಾಡಲಾಗುತ್ತಿದೆ. ತಮ್ಮ ಸ್ವಂತ ವೆಚ್ಚದಲ್ಲಿ ಡೀಸೆಲ್ ತುಂಬಿಸಿದವರಿಗೆ ಮಾತ್ರ ಆಂಬ್ಯುಲೆನ್ಸ್ ಜಾಗ ಬಿಟ್ಟು ಕದಲುತ್ತದೆ. ಇಲ್ಲವಾದಲ್ಲಿ ಶೆಡ್ ಅಲ್ಲಿ ವಿಶ್ರಾಂತಿ ಪಡೆಯುತ್ತದೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ 750 ಹಾಗೂ ರಾಜಧಾನಿ ಬೆಂಗಳೂರಿಗೆ ಹೋಗಬೇಕಾದರೆ 1500 ಡೀಸೆಲ್ ವೆಚ್ಚ ಭರಿಸಬೇಕು.
*108 ಇದ್ದರೂ ದುರ್ಲಭ*
ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ 108 ಮೂರು ಆಂಬ್ಯುಲೆನ್ಸ್ ವಾಹನ ಒದಗಿಸಲಾಗಿದೆ. ಆದರೆ ಇವುಗಳ ನಿರ್ವಹಣೆಯನ್ನು ಬೆಂಗಳೂರಿನಿಂದ ಖಾಸಗಿಯವರು ನಡೆಸುತ್ತಾರೆ. ಆದ್ದರಿಂದ ಸಕಾಲಕ್ಕೆ ಸಿಗುವುದು ಕಷ್ಟ.ಅನೇಕ ಸಂದರ್ಭಗಳಲ್ಲಿ ರೋಗಿಗಳಿಗೆ ಆಕ್ಸಿಝನ್ ಸಮೇತ ಆಂಬ್ಯುಲೆನ್ಸ್ ಅಗತ್ಯವಿರುತ್ತದೆ. ಖಾಸಗಿ ಆಂಬ್ಯುಲೆನ್ಸ್ಗಳು ಬೆಂಗಳೂರಿಗೆ 4-6 ಸಾವಿರ ರೂ. ಪಡೆಯುತ್ತದೆ. ಆದ್ದರಿಂದ ಬಡ ಜನ ಪರದಾಡುವಂತಾಗಿದೆ.
*ಚುನಾವಣೆ ಹೊಡೆತ*
ತಾಲೂಕಿನಲ್ಲಿ ಸಮಾಜ ಸೇವೆ ಮೂಲಕ ಹೆಸರಾದ ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿ ಗೌಡ ಹಾಗೂ ಜಿ.ಪಂ.ಮಾಜಿ ಸದಸ್ಯ ಡಾ.ಕೆ.ಕೆಂಪರಾಜು ಕರೋನಾ ಸಂದರ್ಭದಲ್ಲಿ ಪ್ರಾರಂಭಿಸಿದ ಉಚಿತ ಆಂಬ್ಯುಲೆನ್ಸ್ ಸೇವೆ ಇಲ್ಲಿಯವರೆಗೆ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ನಡೆದುಕೊಂಡು ಬಂದಿತ್ತು. ಜನರಿಗೆ ಅನುಕೂಲವಾಗುತ್ತಿತ್ತು.
ಇಬ್ಬರೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಚುನಾವಣೆಯಲ್ಲಿ ಪುಟ್ಟಸ್ವಾಮಿ ಗೌಡ ಗೆಲುವು ಸಾಧಿಸಿ, ಕೆಂಪರಾಜು ಪರಾಭವಗೊಂಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಸ್ಥಗಿತಗೊಂಡ ಉಚಿತ ಆಂಬ್ಯುಲೆನ್ಸ್ ಸೇವೆ ಚುನಾವಣೆ ಮುಗಿದು 10 ದಿನ ಕಳೆದರೂ ಪುನರಾಂಭಗೊಂಡಿಲ್ಲ. ಅವು ಮತ್ತೆ ಕಾರ್ಯಾರಂಭ ಮಾಡುತ್ತವೋ ಇಲ್ಲವೋ ಎಂಬ ಅನುಮಾನ ಜನರನ್ನು ಕಾಡುತ್ತಿದೆ.ನೂತನವಾಗಿ ಆಯ್ಕೆಯಾಗಿರುವ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಬಗ್ಗೆ ಗಮನಹರಿಸಿ ಸಾರ್ವಜನಿಕ ಆಸ್ಪತ್ರೆಯನ್ನು ಆಂಬ್ಯುಲೆನ್ಸ್ ಕೊರತೆಯಿಂದ ಪಾರು ಮಾಡಿದರೆ ಜನರಿಗೆ ಅನುಕೂಲವಾಗಲಿದೆ.
Leave a Review