ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೊಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಪರ್ಧಾತ್ಮಕ ಪರೀಕ್ಷಾ ಆಂಕಾಕ್ಷಿಗಳಿಗಾಗಿ ಶಾಸಕರು ಹಾಗೂ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಅವರ ಪ್ರಯೋಜಕತ್ವದಲ್ಲಿ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವತಿಯಿಂದ ಹೊಸಕೋಟೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ ಎಂದು ನಿರ್ದೇಶಕ ಬಿ.ಎನ್.ಸುರೇಶ್ ತಿಳಿಸಿದರು.
ದೇವನಹಳ್ಳಿಯ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯು ಜ್ಞಾನಸೇತು ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ತರಬೇತಿ ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಪೌಂಡೇಶನ್ ಕೋರ್ಸ್ ಆಗಿ ರಚನೆಗೊಂಡಿದ್ದು ಅಭ್ಯರ್ಥಿಗಳಿಗೆ ನಿರಂತರ 6 ತಿಂಗಳುಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯನ್ನು ಅಭ್ಯರ್ಥಿಗಳು ಪಡೆದುಕೊಳ್ಳುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಐ.ಎ.ಎಸ್, ಕೆ.ಎ.ಎಸ್, ಪಿ.ಎಸ್.ಐ, ಪಿ.ಡಿ.ಓ, ಗ್ರೂಪ್-ಸಿ, ಐಫ್.ಡಿ.ಎ, ಎಸ್.ಡಿ.ಎ, ವಿ.ಎ.ಓ, ಪಿ.ಸಿ, ಶಿಕ್ಷಕರ ಟಿ.ಇಟಿ ಮತ್ತು ಸಿ.ಇ.ಟಿ, ಆರ್.ಆರ್.ಬಿ, ಎಸ್.ಎಸ್.ಸಿ ಹಾಗೂ ಬ್ಯಾಂಕಿoಗ್ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂದರು.
ತರಬೇತಿಯನ್ನು ಹೊಸಕೋಟೆ ನಗರದಲ್ಲಿರುವ ವೆಂಕಟಾದ್ರಿ ಪಾರ್ಟಿ ಹಾಲ್ನಲ್ಲಿ ನಡೆಸಲಾಗುತ್ತದೆ. ಆನ್ಲೈನ್ ಮತ್ತು ಆಫ್ಲೈನ್ ಎರಡರ ಮೂಲಕವೂ ತರಬೇತಿ ನೀಡುವುದರ ಜೊತೆಗೆ ಆರ್ಟ್ ಕ್ಲಾಸ್ಗಳ ಮೂಲಕ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಬೋಧಿಸಲಾಗುತ್ತದೆ. ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಏ.10 ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ಅಭ್ಯರ್ಥಿಗಳು ಕನಿಷ್ಠ ಪಿ.ಯು.ಸಿ. ಮತ್ತು ಯಾವುದೇ ಪದವಿಯನ್ನು ಪಡೆಯುತ್ತಿರಬಹುದು/ಪೂರ್ಣಗೊಳಿಸರಬಹುದು. ಅರ್ಜಿಯನ್ನು ಹೊಸಕೋಟೆಯ ವೆಂಕಟಾದ್ರಿ ಪಾರ್ಟಿ ಹಾಲ್ನಲ್ಲಿ ಪಡೆದು ಸಲ್ಲಿಸಬಹುದಾಗಿರುತ್ತದೆ. ಅರ್ಜಿಯೊಂದಿಗೆ ಆಧಾರ್ಕಾರ್ಡ್ ಝೆರಾಕ್ಸ್, ಮತದಾರರ ಗುರುತಿನ ಚೀಟಿ ಮತ್ತು ಒಂದು ಭಾವಚಿತ್ರವನ್ನು ನೀಡಬೇಕಾಗಿರುತ್ತದೆ. ಹೊಸಕೋಟೆ ಕ್ಷೇತ್ರದ ಅಭ್ಯರ್ಥಿಗಳಿಗೆ ಮಾತ್ರ ಈ ಅವಕಾಶವನ್ನು ಕಲ್ಪಿಸಿಕೊಡಲಾಗಿರುತ್ತದೆ. ಸುಮಾರು 250 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದ್ದು ದಲು ಬಂದವರಿಗೆ ಆದ್ಯತೆಯನ್ನು ನೀಡಲಾಗುತ್ತದೆ.
ಶಾಸಕರಾದ ಶರತ್ ಬಚ್ಚೇಗೌಡ ಅವರ ಪ್ರಾಯೋಜಕತ್ವದಲ್ಲಿ, ಜ್ಞಾನಗಂಗೋತ್ರಿ ಸಂಸ್ಥೆಯು ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಏ.11 ರಂದು ಶಾಸಕರು ಹೊಸಕೋಟೆಯ ವೆಂಕಟಾದ್ರಿ ಪಾರ್ಟಿಹಾಲ್ನಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಅಂದಿನಿoದಲೇ ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಗಣ್ಯರು ಮತ್ತು ಜ್ಞಾನಗಂಗೋತ್ರಿ ಸಂಸ್ಥೆಯ ನಿರ್ದೇಶಕರು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿ ರಾಕೇಶ್ ಎಸ್.ಆರ್. ಮಾತನಾಡಿ. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗುತ್ತಿದೆ. ಎಷ್ಟೇ ಪದವಿಗಳನ್ನು ಪಡೆದುಕೊಂಡರೂ ಕೊನೆಗೆ ಸರ್ಕಾರಿ ಉದ್ಯೋಗ ಪಡೆಯಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಪರೀಕ್ಷೆಗಳನ್ನು ಪಡೆದು ಅದರಲ್ಲಿ ಯಶಸ್ವಿಯಾಗುವುದು ಸುಲಭದ ಕೆಲಸವಲ್ಲ. ಇದಕ್ಕೆ ಸೂಕ್ತ ತಯಾರಿ ಮತ್ತು ಮಾರ್ಗದರ್ಶನ ಅವಶ್ಯಕವಾಗಿರುತ್ತದೆ. ಕೆಲವು ಬಡ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ತರಬೇತಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಸಂಬoಧ ಶಾಸಕ ಶರತ್ ಬಚ್ಚೇಗೌಡರು ತಮ್ಮ ಕ್ಷೇತ್ರದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಕೊಡಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.
ರಾಜ್ಯದಲ್ಲಿ ಸುಮಾರು 2.84 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಕಳೆದ ಬಜೆಟ್ನಲ್ಲಿ 56,432 ಹುದ್ದೆಗಳನ್ನು ಹಂತಹoತವಾಗಿ ಭರ್ತಿ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಶಾಸಕರು ಸೂಕ್ತ ಸಮಯಕ್ಕೆ ತರಬೇತಿಯನ್ನು ಕೊಡಿಸುತ್ತಿದ್ದು ಇದನ್ನು ಕ್ಷೇತ್ರ ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು
ಹೆಚ್ಚಿನ ಮಾಹಿತಿಗಾಗಿ: 79967 88333/666/000, 88847 61999, 99163 99276 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಹೊಸಕೋಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗಾಗಿ ಉಚಿತ ಕಾರ್ಯಗಾರ ಏ.11 ರಿಂದ ಆರಂಭ



