ಬೊಮ್ಮನಹಳ್ಳಿ: ಹೊಸೂರು ಮುಖ್ಯ ರಸ್ತೆಯಲ್ಲಿರುವ ಸಿಲ್ಕ್ ಬೋರ್ಡ್ ಸಮೀಪದ ರೂಪೇನ ಅಗ್ರಹಾರದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಪೂರ್ಣ ಕುಂಭಾಭಿಷೇಕ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮ ಜನವರಿ 22ರ ಸೋಮವಾರ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಜನವರಿ 20ನೇ ಶನಿವಾರದಿಂದ 22ನೇ ಸೋಮವಾರದವರೆಗೆ ಮೂರು ದಿನಗಳ ಕಾಲ ದೇವಾಲಯದ ಆವರಣದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಶ್ರೀ ಲಕ್ಷ್ಮೀ ವೆಂಕಟೇಶ್ವರ, ವೀರಾಂಜನೇಯ, ಮಹಾಗಣಪತಿ, ವೇದಮಾತಾ ಗಾಯತ್ರಿ, ಶ್ರೀ ಸರ್ವಾಭೀಷ್ಠ ಶನೇಶ್ಚರಸ್ವಾಮಿ, ಅದಿತ್ಯಾದಿ ನವಗ್ರಹ, ನಾಗದೇವತೆ ಮತ್ತು ರಾಜಗೋಪುರ ಧ್ವಜಸ್ತಂಭ, ವಿಮಾನಗೋಪುರಗಳ ಜೀರ್ಣೋದ್ಧಾರ ಹಾಗೂ ಕುಂಭಾಭಿಷೇಕ ಪವಿತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಜಿ. ನರೇಂದ್ರ ಬಾಬು ಮಾತನಾಡಿ ಸುಸಜ್ಜಿತ ಸುಂದರ ವಿನ್ಯಾಸದೊಂದಿಗೆ ಹಲವು ದೇವರುಗಳ ಜೊತೆಗೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ನೂತನ ದೇವಸ್ಥಾನ ಉದ್ಘಾಟನೆ ಗೊಳ್ಳಲಿದೆ. ರೂಪೇನ ಅಗ್ರಹಾರ ಮತ್ತು ಎನ್.ಜಿ.ಆರ್ ಬಡಾವಣೆ ಹಾಗೂ ಸುತ್ತಮುತ್ತಲಿನ ಬಡಾವಣೆಯ ಭಕ್ತ ಸಮೂಹ ಆಗಮಿಸಿ ಸನ್ನಿಧಾನದಲ್ಲಿ ಭಕ್ತಿ ಪರ್ವ ಮೆರೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನ ಅರ್ಚಕರಾದ ಶ್ರೀವಿದ್ವಾನ್ ವಿ.ಎನ್. ಕೃಷ್ಣಭಟ್ಟರು ಮಾತನಾಡಿ ಕಲಿಯುಗ ಅವತಾರ ಪುರುಷ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸನ್ನಿಧಿಯಲ್ಲಿ ಆಂಜನೇಯ ಸ್ವಾಮಿ ಸಮೇತ 1992ರಲ್ಲಿ ಗೋಪಾಲರೆಡ್ಡಿ ಕುಟುಂಬ ದೇವಾಲಯದ ಕುಂಭಾಭಿಷೇಕ ನೆರವೇರಿಸಿದ್ದರು. ಗೋಪಾಲರೆಡ್ಡಿ ಕಾಲಾನಂತರ ಅವರು ಧರ್ಮಪತ್ನಿ ಕಮಲಮ್ಮ ಮತ್ತು ಮಕ್ಕಳಾದ ಜಿ.ನರೇಂದ್ರ ಬಾಬು ದೇವಾಲಯದ ಜೀರ್ಣೋದ್ಧಾರ ಕೈಗೊಳ್ಳುವ ವೇಳೆಯಲ್ಲಿ ಮೆಟ್ರೋ ಕಾಮಗಾರಿ ಶುರುವಾಗಿ ದೇವಾಲಯ ಶಿಥಿಲಾವಸ್ಥೆ ತಲುಪಿತ್ತು.ಈಗ ಸಂಪೂರ್ಣ ದೇವಸ್ಥಾನ ನವೀಕೃತವಾಗಿ ಜೀರ್ಣೋದ್ಧಾರವಾಗಿ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ದಿನವೇ ಕುಂಭಾಭಿಷೇಕ ನಡೆಯುತ್ತಿರುವುದು ಮಂಗಳಕರವಾಗಿದೆ ಎಂದರು.
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಸತೀಶ್ ರೆಡ್ಡಿ, ಎಸ್.ಆರ್.ವಿಶ್ವನಾಥ್, ಮೇಲುಕೋಟೆ ಯತೀರಾಜ ಸ್ವಾಮೀಜಿ ಸೇರಿದಂತೆ ಹಲವು ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.