ಎರಡು ದಶಕಗಳ ಹಿಂದೆ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(MGNREGA) ಯೋಜನೆಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ನಾಶ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕಿಡಿಕಾರಿದ್ದಾರೆ.
ಹೊಸದಾಗಿ ಅಂಗೀಕರಿಸಲಾದ ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ “ಗ್ರಾಮ ವಿರೋಧಿ” ಮತ್ತು “ರಾಜ್ಯಗಳ ವಿರೋಧಿ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಜಿ ರಾಮ್ ಜಿ ಮಸೂದೆ MGNREGAನ ಪರಿಷ್ಕರಣೆಯಲ್ಲ. ಬದಲಾಗಿ ಅದರ ಮೂಲ ತತ್ವಗಳನ್ನು ದುರ್ಬಲಗೊಳಿಸಲಾಗಿದೆ. “ನಿನ್ನೆ ರಾತ್ರಿ, ಮೋದಿ ಸರ್ಕಾರ ಇಪ್ಪತ್ತು ವರ್ಷಗಳ MGNREGA ಯನ್ನು ಒಂದೇ ದಿನದಲ್ಲಿ ನಾಶ ಮಾಡಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಇದು ಹಕ್ಕು ಆಧಾರಿತ, ಬೇಡಿಕೆ ಆಧಾರಿತ ಗ್ಯಾರಂಟಿಯನ್ನು ನಾಶ ಮಾಡುತ್ತದೆ ಮತ್ತು ಅದನ್ನು ದೆಹಲಿಯಿಂದ ನಿಯಂತ್ರಿಸಲ್ಪಡುವ ಪಡಿತರ ಯೋಜನೆಯಾಗಿ ಪರಿವರ್ತಿಸುತ್ತಿದೆ. ಇದು ರಾಜ್ಯಗಳ ವಿರೋಧಿ ಮತ್ತು ಗ್ರಾಮ ವಿರೋಧಿಯಾಗಿದೆ” ಎಂದು ಆರೋಪಿಸಿದ್ದಾರೆ.



