ಗಣೇಶ್ ನಾಯಕನಾಗಿ ನಟಿಸುತ್ತಿರುವ ರಾಮೇನಹಳ್ಳಿ ಜಗನ್ನಾಥ ನಿರ್ದೇಶನ ದ ನೂತನ ಚಿತ್ರ `ತಮ್ಮ ಸುಖಾಗಮನ ಬಯಸುವ’. ವೈಷ್ಣವಿ ಫಿಲಂಸ್ ಮೂಲಕ ವಿಜಯ್ ಲೋಹಿತ್ ನಿರ್ಮಿಸುತ್ತಿರುವ, ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣದ ಈ ಚಿತ್ರದ ಮುಹೂರ್ತ ಸಮಾರಂಭ ಮಹಾ ಶಿವರಾತ್ರಿಯಂದು ಶ್ರೀ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಿಲ್ಪ ಗಣೇಶ್ ಆರಂಭ ಫಲಕ ತೋರಿದರು.
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ, ಮಾತನಾಡಿ, ೨೦೦೬ ರಲ್ಲಿ `ಮುಂಗಾರು ಮಳೆ’ ತೆರೆ ಕಂಡಾಗ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಇಂದು ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ. ಇದು ಗಣೇಶ್ ಅವರ ಇಪ್ಪತ್ತು ವರ್ಷಗಳ ಜರ್ನಿಯನ್ನು ಸಂಭ್ರಮಿಸುವ ಸಮಯ. `ತೀರ್ಥರೂಪ ತಂದೆಯವರಿಗೆ’ ಚಿತ್ರದ ಚಿತ್ರೀಕರಣ ಸಮಯದಲ್ಲಿ ನನ್ನ ಸ್ನೇಹಿತನ ಮೂಲಕ ಗಣೇಶ್ ಅವರನ್ನು ಸಂಪರ್ಕ ಮಾಡಿ ಈ ಚಿತ್ರದ ಕಥೆ ಹೇಳಿದೆ. ಇದು ಗಣೇಶ್ ಅವರಿಗಾಗಿಯೇ ಬರೆದಿರುವ ಕಥೆ.
ಈ ಕಥೆಗೆ ಅವರೆ ಸೂಕ್ತ ನಾಯಕ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ. ಇನ್ನೂ, ಶೀರ್ಷಿಕೆಯ ಬಗ್ಗೆ ಹೇಳುವುದಾದರೆ, ಶೀರ್ಷಿಕೆ ಬಳಕೆಗೆ ಹತ್ತಿರವಾಗಿರಬೇಕು. ಜನರಿಗೆ ಆಪ್ತವಾಗಬೇಕು. ನನ್ನ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಹಾಗೆ ಇತ್ತು. ಈ ಶೀರ್ಷಿಕೆ ಕೂಡ ಜನರಿಗೆ ಆಪ್ತವಾಗುತ್ತದೆ ಜೊತೆಗೆ ಕಥೆಗೂ ಹಾಗೂ ಪಾತ್ರಗಳಿಗೂ ಪೂರಕವಾಗಿದೆ ಎಂದರು.
ಜಗನ್ನಾಥ ಅವರಿಂದ ಕಥೆ ಕೇಳುವಾಗಲೇ ಸಂತೋಷದಲ್ಲಿ ಅಳು ಬಂತು. ಅಂತಹ ಅಪರೂಪದ ಕಥೆ ಇದು. ಎಂದರು ನಾಯಕ ಗಣೇಶ್. ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ಮೊದಲ ಚಿತ್ರಕ್ಕೆ ತಾವು ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ ಎಂದರು ನಿರ್ಮಾಪಕ ವಿಜಯ್ ಲೋಹಿತ್. ಸಹ ನಿರ್ಮಾಪಕ ಸತೀಶ್ ಎಚ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
`ತಮ್ಮ ಸುಖಾಗಮನ ಬಯಸುವ’ ಗಣೇಶ್ ಚಿತ್ರ ಆರಂಭ



