ಡಾ. ಜಿ.ವೈ. ಪದ್ಮ ನಾಗರಾಜು
ಬೆಂಗಳೂರು: ರಾಜ್ಯ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡ ರಾಜ್ಯಪಾಲರು ತಮ್ಮ ಭಾಷಣದ ಪ್ರತಿಯನ್ನು ಓದದೆ ಕೇವಲ ಒಂದೆರೆಡು ಅಂಶಗಳನ್ನು ಪ್ರಸ್ತಾಪಿಸಿ ಒಂದೇ ಸಾಲಿನಲ್ಲಿ ಭಾಷಣ ಮುಗಿಸಿದ್ದಕ್ಕೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತ್ತು.
ಇಂದು ಬೆಳಿಗ್ಗೆ ೧೧ಗಂಟೆಗೆ ನಿಗದಿತ ಸಮಯಕ್ಕೆ ಕಲಾಪ ಆರಂಭಗೊಂಡಿತ್ತು. ವಿಧಾನಸೌಧಕ್ಕೆ ಬಂದ ರಾಜ್ಯಪಾಲರನ್ನು ವಿಧಾನಸೌಧದ ಪೂರ್ವ ದ್ವಾರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ್ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೂಗುಚ್ಛ ನೀಡಿ ಸ್ವಾಗತಿಸಿದರು.
ಸದನ ಕಲಾಪಕ್ಕೆ ಬಂದ ರಾಜ್ಯಪಾಲರು ಭಾಷಣದ ಸಂಪೂರ್ಣವಾಗಿ ಓದದೆ ಕೇವಲ ಒಂದೆರೆಡು ಅಂಶಗಳನ್ನು ಪ್ರಸ್ತಾಪಿಸಿ ಭಾಷಣವನ್ನು ಮುಗಿಸಿ ವಿಧಾನಸಭೆಯಿಂದ ಹೊರನಡೆದರು. ರಾಜ್ಯಪಾಲರ ಈ ಕ್ರಮವನ್ನು ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದರು.
ಒಂದು ಹಂತದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಅಡ್ಡಗಟ್ಟಿ ಸಂಪೂರ್ಣವಾಗಿ ಭಾಷಣವನ್ನು ಓದುವಂತೆ ಆಗ್ರಹಪಡಿಸಿದರು.
ಈ ಹಂತದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಹರಿಪ್ರಸಾದ್ ನಡುವೆ ನೂಕಾಟ ತಳ್ಳಾಟ ನಡೆಯಿತು. ಕಾಂಗ್ರೆಸ್ ಶಾಸಕರು, ಸದಸ್ಯರು ರಾಜ್ಯಪಾಲರ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ರಾಜ್ಯಪಾಲರ ನಡೆಯನ್ನು ಖಂಡಿಸಿ, ಹೊಸ ಸರ್ಕಾರ ಬಂದಾಗ ಹಾಗೂ ಹೊಸ ವರ್ಷದ ಆರಂಭದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ರಾಜ್ಯಪಾಲರೇ ಸಿದ್ಧಪಡಿಸಿದ್ದ ಭಾಷಣವನ್ನು ಓದುವಂತಿಲ್ಲ. ರಾಜ್ಯ ಸರ್ಕಾರ ಸಂಪುಟದಲ್ಲಿ ಅನುಮೋದಿಸಿದ ಭಾಷಣವನ್ನೇ ಓದುವುದು ಅವರ ಕರ್ತವ್ಯ ಎಂದ ಅವರು, ರಾಜ್ಯಪಾಲರು ತಮ್ಮ ಕರ್ತವ್ಯ ಮಾಡಿಲ್ಲ. ತಾವೇ ತಯಾರಿಸಿದ ಭಾಷಣ ಓದುವ ಮೂಲಕ ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಮ್ಜೀ ಬಿಜಿ ಯೋಜನೆಗೆ ತೀವ್ರ ವಿರೋಧ..
ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಯವರು ಮನರೇಗ ಯೋಜನೆಯನ್ನು ಪುನರ್ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ತಮ್ಮ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯಪಾಲರ ನಡೆಗೆ ತೀವ್ರ ವಿರೋಧ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೆ ಹೊರ ನಡೆದ ಗೆಹ್ಲೋಟ್



