ದೇವನಹಳ್ಳಿ: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಕರ್ತವ್ಯಗಳಿಗೆ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿಗದಿತ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಸಾಕಷ್ಟು ಪೂರ್ವ ಸಿದ್ಧತೆಗಳೊಂದಿಗೆ ಯಾವುದೇ ಲೋಪಗಳಿಗೆ ಆಸ್ಪದವಿಲ್ಲದಂತೆ ಎಚ್ಚರಿಕೆ, ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ||ಎನ್ ಶಿವಶಂಕರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಜಿಲ್ಲಾಡಳಿತ ಭವನದಲ್ಲಿ ನಡೆದ ಚುನಾವಣಾ ಕಾರ್ಯಗಳ ಪೂರ್ವ ಸಿದ್ಧತೆಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಚುನಾವಣಾ ಆಯೋಗವು ಕೇಳುವ ಮಾಹಿತಿಯನ್ನು ಜಿಲ್ಲೆಯ ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ಸಿದ್ಧಪಡಿಸಿ ಸಕಾಲದಲ್ಲಿ ಒದಗಿಸಬೇಕು, ಮಾನವ ಸಂಪನ್ಮೂಲ, ವಿದ್ಯುನ್ಮಾನ ಮತಯಂತ್ರಗಳು (EVM), ತರಬೇತಿ ನಿರ್ವಹಣೆ, ಸಾರಿಗೆ, ಗಣಕೀಕರಣ, ವೆಚ್ಚ ನಿರ್ವಹಣೆ,
ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾವಹಿಸುವಿಕೆ ಮೊದಲಾದ ಕಾರ್ಯಗಳಿಗೆ ನಿಯೋಜಿಸಿದ ನೋಡಲ್ ಅಧಿಕಾರಿಗಳು ತಮ್ಮ ಕಾರ್ಯಗಳ ಕುರಿತ ಸರಿಯಾದ ತಿಳುವಳಿಕೆ ಹೊಂದಿರಬೇಕು, ಈಗಾಗಲೇ ತರಬೇತಿ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಅದರ ಅನುಸಾರವಾಗಿ ತರಬೇತಿಗಳನ್ನು ಆಯೋಜಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಚುನಾವಣಾ ಕರ್ತವ್ಯಗಳನ್ನು ಜಾಗರೂ ಕತೆಯಿಂದ ನಿರ್ವಹಿಸಬೇಕು, ಯಾವುದೇ ಕಾರ್ಯವನ್ನು ಲಘುವಾಗಿ ಪರಿಗಣಿಸದೇ ಆಯೋಗ ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳನ್ನು ನಿರಂತರವಾಗಿ ಗಮನಿಸಿ, ಅರಿತುಕೊಳ್ಳಬೇಕು, ಮತಗಟ್ಟೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.