ಬೆಂಗಳೂರು: ಅಪಾರ್ಟ್ಮೆಂಟ್ ನ 29ನೇ ಮಹಡಿಯಿಂದ ಬಾಲಕಿಯೊಬ್ಬಳು ಬಿದ್ದು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಳಗೆ ಬಿದ್ದಿರುವ ಮೃತದೇಹವು ಛಿದ್ರ ಛಿದ್ರವಾಗಿರುವ ಆಕೆಯ ಮೃತದೇಹವನ್ನು ನೋಡಿ ಆ ತಾಯಿ-ತಂದೆಯ ಪರಿಸ್ಥಿತಿ ಹೇಗಿರಬೇಡ ಎನಿಸುತ್ತದೆ. ಬೇಗೂರು ಬಳಿಯ ಅಪಾರ್ಟ್ಮೆಂಟ್ನಲ್ಲಿ ತಂದೆ-ತಾಯಿ ಜೊತೆ ವಾಸವಿದ್ದ 29ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.
ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಈ ಕೃತ್ಯ ಮಾಡಿಕೊಂಡಿದ್ದಾಳೆ. ಆಕೆಯ ತಂದೆ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ತಾಯಿ ಮನೆಯಲ್ಲಿದ್ದರು.ಮಂಗಳವಾರ ರಾತ್ರಿ ಎಂದಿನಂತೆ ಮಗಳು ಮಲಗಿದ್ದಳು. ಬೆಳಗ್ಗೆ 4.30ರ ಹೊತ್ತಿಗೆ ಆಕೆ ಎದ್ದು ಹಾಲ್ಗೆ ಬಂದಿದ್ದಳು.
ಆಗ ಅಮ್ಮನಿಗೂ ಎಚ್ಚರವಾಗಿ ಆಕೆ ಏನಾಯ್ತು ಅಂತ ಕೇಳಿದ್ದರು. ಆದರೆ ಆಕೆ ಸರಿಯಾಗಿ ಉತ್ತರ ಕೊಡದೆ ಮತ್ತೆ ತನ್ನ ಕೋಣೆಗೆ ಹೋಗಿ ಮಲಗಿದ್ದಳು. ಆದರೆ, ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಆಗಬಾರದ ಘಟನೆ ನಡೆದೇ ಹೋಗಿತ್ತು. ಬಾಲಕಿ ಮತ್ತೆ ಎದ್ದು ಬಂದು ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ್ದಳು.
ಮೇಲಿನಿಂದ ಏನೋ ಬಿದ್ದ ಸದ್ದು ಕೇಳಿ ಅಲ್ಲಿನ ಸೆಕ್ಯುರಿಟಿ ಓಡಿ ಬಂದಿದ್ದ. ಬಂದು ನೋಡಿದರೆ ಬಾಲಕಿಯ ದೇಹ ಛಿದ್ರವಾಗಿತ್ತು. ಕೂಡಲೇ ಆತ ಪೋಷಕರಿಗೆ, ಅಪಾಟ್ರ್ಮೆಂಟ್ ಅಸೋಸಿಯೇಷನ್ ಗೆ ಮಾಹಿತಿ ನೀಡಿದ್ದ. ಬಾಲಕಿಯ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.