ಕನಕಪುರ: ರೈತ ಸೇವಾ ಸಹಕಾರ ಸಂಘದಲ್ಲಿ ಕೋಟ್ಯಾಂತರ ರೂ ಅವ್ಯವಹಾರ ನಡೆದು ಎಂಟು ತಿಂಗಳು ಕಳೆದರೂ ಠೇವಣಿ ದಾರರ
ಹಣ ವಾಪಸ್ ಕೊಡಲು ಯಾವ ಕ್ರಮತೆಗೆದುಕೊಂಡಿದ್ದೀರಿ ಎಂದು ಠೇವಣಿದಾರರು, ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ರೈತ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಸಭೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಂಘದ ಕಚೇರಿಗೆ ಬಂದ ಸಂಘದ ಸದಸ್ಯರು ಮತ್ತು ಠೇವಣಿದಾರರು ಮಾತನಾಡಿ ಸಂಘದ ಬ್ಯಾಂಕಿನಲ್ಲಿ ಅಡಮಾನವಿಟ್ಟಿದ್ದ ಸುಮಾರು 24 ಕೆ.ಜಿ. ಚಿನ್ನವನ್ನು ಅಧಿಕಾರಿಗಳು ಬೇರೆ ಕಡೆ ಅಡಮಾನ ವಿಟ್ಟಿದ್ದಾರೆ,
ಸದಸ್ಯರು ಇಟ್ಟಿದ್ದ ಕೊಟ್ಯಾಂತರ ರೂ ಠೇವಣಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಪ್ರಕರಣ ಬೆಳಕಿಗೆ ಬಂದು ಎಂಟು ತಿಂಗಳು ಕಳೆದರೂ ಸಂಘದಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ಯಾರಿಗೂ ಮಾಹಿತಿ ಇಲ್ಲ,ನಮ್ಮ ಹಣ ನಮಗೆ ಯಾವಾಗ ವಾಪಸ್ ನೀಡುತ್ತೀರಿ ಎಂದು ಅಧ್ಯಕ್ಷರನ್ನು ಠೇವಣಿದಾರರು ತರಾಟೆಗೆ ತೆಗೆದು ಕೊಂಡರು.
ಸಂಘದ ಸದಸ್ಯ ನಾಗೇಶ್, ರಾಮಲಿಂಗೇಗೌಡ, ಮಂಚೆಗೌಡ,ರಾಮಣ್ಣ ಸೇರಿದಂತೆ ಹಲವರು ಮಾತನಾಡಿ ಈ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವವರೆಲ್ಲರೂ ಬಡವರು, ರೈತರು ತಮ್ಮ ಮಕ್ಕಳ ವಿವಾಹ ಮತ್ತು ಭವಿಷ್ಯಕ್ಕಾಗಿ ಕಷ್ಟ ಪಟ್ಟು ಕೂಡಿಟ್ಟಿದ್ದ ಒಬ್ಬೋಬ್ಬರು ಸುಮಾರು 10 ಲಕ್ಷ ದಿಂದ 20 ರಿಂದ 30 ಲಕ್ಷದವರೆಗೂ ಸುಮಾರು 10 ಕೋಟಿಗೂ ಹೆಚ್ಚು ಹಣವನ್ನು ಠೇವಣಿ ಇಟ್ಟಿದ್ದಾರೆ,
ಈಗ ಹಣವನ್ನೆಲ್ಲ ಸಂಘದ ವ್ಯವಸ್ಥಾಪಕ ಸೇರಿ ಇನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದು ಅವ್ಯವಹಾರ ಮಾಡಿದವ ರಿಂದ ವಸೂಲಿ ಮಾಡಲು ಆಗದಿದ್ದರೆ ಸಂಘದ ನಿವೇಶನ ವನ್ನು ಮಾರಿ ಹಣ ಕಳೆದುಕೊಂಡವರಿಗೆ ಹಣ ಕೊಡಿ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಹಿಂದಿನ ಆಡಳಿತ ಮಂಡಳಿಗಳ ನಿರ್ಲಕ್ಷದಿಂದಲೇ ಈ ಅವ್ಯವಹಾರ ನಡೆದಿದೆ ಇಷ್ಟೆಲ್ಲ ಅವ್ಯವಹಾರ ನಡೆದಿದ್ದ ರೂ ಆಡಳಿತ ಮಂಡಳಿ ಸದಸ್ಯರು ಏನು ಮಾಡುತ್ತಿದ್ದರು ಖಾಲಿ ಚೆಕ್ ಗಳಿಗೆ ಹಿಂದಿನ ಅಧ್ಯಕ್ಷರು ಸಹಿ ಮಾಡಿ ಕೊಟ್ಟಿದ್ದಾರೆ ಸಂಘದ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ತಪ್ಪು ಮಾಡಿದವರು ತಿಂಗಳಲ್ಲೇ ಜೈಲಿನಿಂದ ಹೊರ ಬಂದು ಓಡಾಡುತ್ತಿದ್ದಾರೆ ಬ್ಯಾಂಕನ್ನು ನಂಬಿದ ರೈತರು ಬೀದಿಗೆ ಬಿದ್ದಿದ್ದಾರೆ ನಮಗೆ ನ್ಯಾಯ ಕೊಡುವ ವರು ಯಾರು ಕ್ಷೇತ್ರ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಇತ್ತ ಗಮನ ಹರಿಸಬೇಕು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಕೊಡಿಸಲು ಸಂಬಧಪಟ್ಟ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಮನವಿ ಮಾಡಿದರು.
ರೈತ ಸೇವಾ ಸಹಕಾರ ಸಂಘ ಹಲವಾರು ದಶಕಗಳಿಂದ ಬಹಳ ಉತ್ತಮವಾಗಿ ನಡೆದುಕೊಂಡು ಬಂದಿತ್ತು ತನ್ನದೇ ಆದ ಸ್ವಂತ ನಿವೇಶನವನ್ನು ಮಾಡಿಕೊಂಡುಕೋಟ್ಯಾಂತರ ರೂ ವ್ಯವಹಾರ ನಡೆಸುತ್ತಿತ್ತು ಮಾದರಿ ಸಹಕಾರ ಬ್ಯಾಂಕ್ ಆಗಿತ್ತು ಭ್ರಷ್ಟಾಚಾರ ಮಾಡಿ ಅದನ್ನು ದಿವಾಳಿಮಾಡಿದ್ದಾರೆ ಇದರಲ್ಲಿ ಬರಿ ಅಧಿಕಾರಿಗಳ ಕೈವಾಡ ಮಾತ್ರ ಇಲ್ಲ, ಕಾಣದ ಕೈಗಳು ಅವ್ಯವಹಾರದಲ್ಲಿ ಭಾಗಿಯಾಗಿವೆ, ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.