ದೇವನಹಳ್ಳಿ: ಸಾರ್ವಜನಿಕರ ಕೆಲಸಗಳನ್ನು ಮಾಡಲು ಸಾರ್ವಜನಿಕ ಕ್ಷೇತ್ರಕ್ಕೆ ಬರುವ ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರ ಕೆಲಸ ದೇವರ ಕೆಲಸವೆಂದು ಮಾಡಬೇಕು ಎಂದು ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿಯ ಆಲೂರು ಗ್ರಾಮದ ಹಾಲಿನ ಡೈರಿಯ ಆವರಣದಲ್ಲಿ 2023-24 ನೇಯ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಅನೇಕ ಸಮಸ್ಯೆಗಳಿದ್ದು, ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅತ್ಯಂತ ಶ್ರದ್ದೆಯಿಂದ,
ಪ್ರಾಮಾಣಿಕತೆಯಿಂದ ನಾವೆಲ್ಲರು ಶ್ರಮಿಸಬೇಕಾಗಿದೆ ಹಾಗೂ ಗ್ರಾಮಸಭೆಗಳನ್ನು ಮಾಡುವ ಉದ್ದೇಶವೇ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಬೇಕು ಎಂಬುದು, ಆಗಾಗಿ ಈ ಗ್ರಾಮಸಭೆಗಳಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಡಿ ಎಂದರು.ಹಾಗೂ ಸಾರ್ವಜನಿಕರು ಕೂಡಾ ಗ್ರಾಮಸಭೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ಚರಂಡಿ ವ್ಯವಸ್ಥೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮರ್ಪಕವಾಗಿ ಮಾಡಿಕೊಡುವುದರ ಜೊತೆಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಗ್ರಾಮಗಳನ್ನು ಸ್ವಚ್ಛವಾಗಿಡಲು ಹೆಚ್ಚಿನ ಆದ್ಯತೆಯನ್ನು ನೀಡುವಂತೆ ತಿಳಿಸಿದರು.
ಗ್ರಾಮೀಣ ಭಾಗಗಳಿಂದ ನಗರಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗಾಗಿ ಸಮರ್ಪಕವಾದ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಡುವ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಾಗಿದೆ, ಬಸ್ಸಿನ ಸಮಸ್ಯೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯಾವುದೇ ತರಹದ ತೊಂದರೆಯಾಗಬಾರದು.
ಈ ದೇಶಕ್ಕೆ ಅನ್ನ ಕೊಡುವವನು ರೈತ, ರೈತರ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರವನ್ನು ನೀಡಿ, ಯಾವುದೇ ಕಾರಣಕ್ಕೂ ಪದೇ ಪದೇ ಕಛೇರಿಗಳಿಗೆ ಅಲೆಸದಂತೆ ಸಾಧ್ಯವಾದಷ್ಟು ಬೇಗನೆ ಕೆಲಸವನ್ನು ನಿರ್ವಹಿಸಿಕೊಡುವಂತೆ ತಿಳಿಸಿದರು.ಗ್ರಾಮ ಸಭೆಯಲ್ಲಿ ವಿಶೇಷ ಚೇತನರಿಗೆ ಸೋಲಾರ್ ಲೈಟ್ ಮತ್ತು ಫ್ಯಾನ್ ಗಳನ್ನು ವಿತರಿಸಿದರು.
ಸಭೆಯಲ್ಲಿ ಉಪ ತಹಶೀಲ್ದಾರ್ ಚೈತ್ರ, ನೋಡಲ್ ಅಧಿಕಾರಿ ಕೃಷ್ಣಕುಮಾರ್ , ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಗ್ರಾಪಂ ಉಪಾಧ್ಯಕ್ಷ ಮುನಿರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಗೌರಮ್ಮ ರಾಮಣ್ಣ, ಸಿ.ಕಾಂತ ಮುನಿರಾಜು, ಅಂಬಿಕಾ ಪ್ರಭು, ಆರ್ ರಘು, ಎ. ಮೂರ್ತಿ, ಮುನಿ ನಂಜಪ್ಪ, ಮೀನಾಕ್ಷಮ್ಮ ಕೃಷ್ಣಮೂರ್ತಿ, ಚಿಕ್ಕಮನಿ ಶಾಮಪ್ಪ, ಕೃಷ್ಣಮ್ಮ, ಬೈರೇಗೌಡ, ಕಾರ್ಯದರ್ಶಿ ಅದೇಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮಹಿಳಾ ಸಂಘದ ಸದಸ್ಯರು, ಸುತ್ತ-ಮುತ್ತಲಿನ ಗ್ರಾಮಸ್ಥರು, ಆಶಾ ಕಾಯಕರ್ತೆಯರು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.