This is the title of the web page
This is the title of the web page

ಒಳಾಂಗಣ ಅಥ್ಲೆಟಿಕ್ಸ್: ಬೋಸ್ಟನ್‌ನಲ್ಲಿ ತೇಜಸ್ವಿನ್‌ಗೆ ಚಿನ್ನ

ಬೋಸ್ಟನ್: ಭಾರತದ ಅಥ್ಲೀಟ್ ತೇಜಸ್ವಿನ್ ಶಂಕರ್ ನ್ಯೂ ಬ್ಯಾಲೆನ್ಸ್ ಇಂಡೋರ್ ಗ್ರ್ಯಾನ್‌ಪ್ರೀ ಅಥ್ಲೆಟಿಕ್ ಕೂಟದ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದರು.

24 ವರ್ಷದ ತೇಜಸ್ವಿನ್ ಅವರು ಇಲ್ಲಿ ಕಠಿಣ ಪೈಪೋಟಿ ಎದುರಿಸಿ ಗೆದ್ದರು. 2.26 ಮೀಟರ್ಸ್ ಎತ್ತರಕ್ಕೆ ಜಿಗಿದರು.

ಮಾಜಿ ವಿಶ್ವ ಚಾಂಪಿಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ, ಬಹಾಮಾಸ್ ದೇಶದ ಡೊನಾಲ್ಡ್ ಥಾಮಸ್ ಅವರು ಒಡ್ಡಿದ ಕಠಿಣ ಸ್ಪರ್ಧೆಯನ್ನು ಮೀರಿ ನಿಂತರು. 38 ವರ್ಷದ ಥಾಮಸ್ 2.23 ಮೀಟರ್ಸ್‌ ಎತ್ತರಕ್ಕೆ ಜಿಗಿದು ಎರಡನೇ ಸ್ಥಾನ ಪಡೆದರು. ಅಮೆರಿಕದ ಡ್ಯಾರಿಲ್ ಸುಲೈವನ್ (2.19ಮೀ) ಮೂರನೇ ಸ್ಥಾನ ಗಳಿಸಿದರು.

ಹೋದ ವರ್ಷದ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದಿದ್ದ ತೇಜಸ್ವಿನ್ ಅವರಿಗೆ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಹುರಿದುಂಬಿಸಿದರು. ಅವರು ತಮ್ಮ ಮೊದಲ ನಾಲ್ಕು ಪ್ರಯತ್ನಗಳಲ್ಲಿ (2.14, 2.19, 2.23 ಮತ್ತು 2.26 ಮೀ) ಸಫಲರಾದರು.

ತಮ್ಮ ವೈಯಕ್ತಿಕ ಶ್ರೇಷ್ಟ ಮಟ್ಟವನ್ನು (2.29 ಮೀ) ದಾಟಲು ಅವರು ಮೂರು ಪ್ರಯತ್ನಗಳನ್ನು ತೆಗೆದುಕೊಂಡರು. ಅದರೆ 2.30 ಮೀಟರ್ಸ್ ದಾಟುವಲ್ಲಿ ವಿಫಲರಾದರು. ಒಳಾಂಗಣ ಕೂಟಗಳಲ್ಲಿ ಅವರ ಶ್ರೇಷ್ಠ ಸಾಧನೆಯು 2.28 ಮೀಟರ್ಸ್ ಆಗಿತ್ತು. 2018ರಲ್ಲಿ ಅವರು ಈ ಸಾಧನೆ ಮಾಡಿದ್ದರು.

ಹೋದ ವರ್ಷ ಕನ್ಸಾಸ್‌ನಲ್ಲಿ ನಡೆದಿದ್ದ ಎನ್‌ಸಿಎಎ ಪ್ರಶಸ್ತಿಯನ್ನೂ ಜಯಿಸಿದ್ದರು.

ಚಿನ್ನ ಪದಕ ಜಯಿಸಿದ ಸಾಧನೆಯ ವಿಡಿಯೊ ತುಣುಕನ್ನು ಟ್ವೀಟ್ ಮಾಡಿರುವ ತೇಜಸ್ವಿನ್, ‘ಹೊಸ ವರ್ಷಕ್ಕೆ ಅದ್ಭುತವಾದ ಆರಂಭ ಲಭಿಸಿದೆ. ಅಗ್ರಮಾನ್ಯ ಅಥ್ಲೀಟ್‌ಗಳೊಂದಿಗೆ ಸ್ಪರ್ಧಿಸುತ್ತಿರುವುದು ಪುಳಕ ಮೂಡಿಸಿದೆ’ ಎಂದು ಬರೆದ್ದಿದ್ದಾರೆ.