ಬೆಂಗಳೂರು: ಖಾಸಗಿ ಹಣಕಾಸು ಸಂಸ್ಥೆಯ ಕೆಲವು ಉದ್ಯೋಗಿಗಳು ತಮ್ಮ ಶಾಖೆಗಳಲ್ಲಿ ಗ್ರಾಹಕರು ಗಿರವಿಯಾಗಿ ಇಟ್ಟಿದ್ದ 85.78 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಣನಕುಂಟೆ ಕೆಎಲ್ಎಂ ಆಕ್ಸಿವಾ ಫಿನ್ವೆಸ್ಟ್ ಲಿಮಿಟೆಡ್ನ ಆರೋಪಿ ನೌಕರರು, ಒಬ್ಬರಿಗೊಬ್ಬರು ಶಾಮೀಲಾಗಿ ಕದ್ದ ಚಿನ್ನಾಭರಣಗಳನ್ನು ಗಿರವಿ ಇಟ್ಟು ನಕಲಿ ಸಾಲ ಖಾತೆ ಸೃಷ್ಟಿಸಿ ಸಾಲ ಪಡೆದಿದ್ದಾರೆ . ಕೆಎಲ್ಎಂ ಆಕ್ಸಿವಾ ಫಿನ್ವೆಸ್ಟ್ ಲಿಮಿಟೆಡ್ನ ಪ್ರಾದೇಶಿಕ ವ್ಯವಸ್ಥಾಪಕ ಸಿ. ಲಕ್ಷ್ಮಣ್ ದೂರು ನೀಡಿದ್ದು,ಈ ಸಂಬಂಧಒಂಬತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಸ್ಥೆಯ ಕೋಣನಕುಂಟೆ ಶಾಖೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಟೇಸ್ವಾಮಿ ಅವರು 444.56 ಗ್ರಾಂ ಚಿನ್ನವನ್ನು ಗಿರವಿ ಇಡಲಾಗಿದೆ ಎಂದು ತೋರಿಸಲು 14 ಚಿನ್ನದ ಸಾಲದ ಖಾತೆಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ವೈಯಕ್ತಿಕ ಬಳಕೆಗೆ 17.92 ಲಕ್ಷ ರೂ. ಬಳಸಿಕೊಂಡಿದ್ದಾರೆ. ಇದಲ್ಲದೆ, ಖಾತೆಯಲ್ಲಿ ಕೇವಲ 123 ಗ್ರಾಂ ಚಿನ್ನವಿದ್ದರೂ, 1,291.21 ಕೆಜಿ ಚಿನ್ನವನ್ನು ಗಿರವಿ ಇಡಲಾಗಿದೆ ಎಂದು ತೋರಿಸಲು 23 ನಕಲಿ ಸಾಲದ ಖಾತೆಗಳನ್ನು ಸೃಷ್ಟಿಸಲಾಗಿದೆ. ಉಳಿದ ಚಿನ್ನಾಭರಣಗಳು ಕಾಣೆಯಾಗಿವೆ.
ಬ್ರಿಗೇಡ್ ಮಿಲೇನಿಯಂ ಶಾಖೆಯ ವ್ಯವಸ್ಥಾಪಕ ಸಂತೋಷ್ ಅವರೊಂದಿಗೆ ಶಾಮೀಲಾಗಿ ಮಂಟೇಸ್ವಾಮಿ ಅವರು ತಮ್ಮ ಶಾಖೆಯಲ್ಲಿ ಗ್ರಾಹಕರು ಗಿರವಿ ಇಟ್ಟಿದ ಚಿನ್ನಾಭರಣಗಳನ್ನು ಕದ್ದು ಗ್ರಾಹಕ ಸಾಗರ್ ಎಂಬಾತನಿಗೆ ನೀಡಿದ್ದಾರೆ. ಇವರು ಅಲ್ಲಿ 19.26 ಗ್ರಾಂ ಚಿನ್ನಾಭರಣವನ್ನು 77,000 ರೂ.ಗೆ ಮತ್ತು 18 ಗ್ರಾಂ ಚಿನ್ನಾಭರಣವನ್ನು 73,000 ರೂ. ಗೆ ಗಿರವಿ ಇಟ್ಟಿದ್ದರು.
ಇದಲ್ಲದೆ, ಮಂಟೇಸ್ವಾಮಿ ತಮ್ಮ ಶಾಖೆಯಲ್ಲಿ ಗ್ರಾಹಕರು ಗಿರವಿಯಾಗಿ ಇಟ್ಟಿದ್ದ ಚಿನ್ನಾಭರಣಗಳನ್ನು ಕದ್ದು, ಅವುಗಳನ್ನು ಗ್ರಾಹಕ ಬಸವರಾಜ್ ಅವರಿಗೆ ನೀಡಿದ್ದಾರೆ, ಅವರು ಶಾಖಾ ವ್ಯವಸ್ಥಾಪಕಿ ಪುಷ್ಪಾ ಬಿಎಂ ಅವರೊಂದಿಗೆ ಶಾಮೀಲಾಗಿ ಸಂಸ್ಥೆಯ ತಲಘಟ್ಟಪುರ ಶಾಖೆಯಲ್ಲಿ ಗಿರವಿ ಇಟ್ಟಿದ್ದರು ಎಂಬ ಆರೋಪವಿದೆ.
ದೂರಿನ ಆಧಾರದ ಮೇಲೆ ಕೋಣನಕುಂಟೆ ಪೊಲೀಸರು ಮಂಟೇಸ್ವಾಮಿ, ಪೂಜಾ ಸಿ, ಪುಷ್ಪಾ ಬಿ ಎಂ, ಸಂತೋಷ್ ಕುಮಾರ್, ಅಂಬಿಕಾ, ಸಾಗರ್, ಬಸವರಾಜ್, ಸಿಂಧು ಮತ್ತು ಸಾಕಮ್ಮ ಟಿಕೆ ವಿರುದ್ಧ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಲ್ಎಕ್ಸ್ಐ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ರವಿ ಅವರು ಮಂಗಳವಾರ ಸಂತೋಷ್ ಕುಮಾರ್ ಮತ್ತು ಪೂಜಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು, ಸುಪ್ರೀಂ ಕೋರ್ಟ್ನ ತೀರ್ಪಿನಂತೆ ಆರ್ಥಿಕ ಅಪರಾಧಗಳ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವ ಅಧಿಕಾರವನ್ನು ಮಿತವಾಗಿ ಬಳಸಬೇಕಾಗುತ್ತದೆ ಎಂದು ಹೇಳಿದರು. ಆರೋಪಿಗಳು ತಾವು ನಿರಪರಾಧಿಗಳಾಗಿದ್ದು, ತಮ್ಮನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.