ರಾಮನಗರ: ಗ್ರಾಮ ಪಂಚಾಯತಿ ಪ್ರಗತಿ ಪರಿಶೀಲನೆ ಸಭೆಗೆ ಗೈರಾದ ಇಲಾಖಾ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳುವಂತೆ ಸಭೆ ಸಮ್ಮತಿ ಸೂಚಿಸಿದೆ ಎಂದು ಗ್ರಾ ಪಂ ಅಧ್ಯಕ್ಷೆ ಕವಿತಾಭುಜಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಬಿಡದಿ ಹೋಬಳಿ ಗೋಪಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಕೆಡಿಪಿ ಸಭೆಗೆ ಬಹಳ ಮಹತ್ವವಿದೆ. ಸರ್ಕಾರದ ಯೋಜನೆಗಳನ್ನು ಅನುಷ್ಟಾನ ಮಾಡಲು ಸಾಧಕ ಭಾದಕಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಬಹುದು.
ಆದರೆ ಕೆಲವು ಇಲಾಖಾ ಅಧಿಕಾರಿಗಳು ಸಭೆಗೆ ಗೈರಾಗಿದ್ದು ಪಂಚಾಯಿತಿ ಮಟ್ಟದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ನಡೆಯಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆಗಾಗಿ ಅಂತವರ ವಿರುದ್ದ ಕಾನೂನು ಕ್ರಮ ವಹಿಸುವಂತೆ ಪತ್ರ ಬರೆಯಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಸಿ.ಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ರೇಷ್ಮೆ ಇಲಾಖೆಯಲ್ಲಿ ಕಳೆದ 8 ವರ್ಷಗಳಿಂದ ಎಂ ಸಿ ಕೊಟ್ಟಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ರೇಷ್ಮೆ ಇಲಾಖೆ ಪರಿಕರಗಳನ್ನು ವಿತರಿಸುವುದಾಗಿ ಪಲಾನುಭವಿಗಳಿಂದ ಶ್ರವಣ್ ಕುಮಾರ್ ಎಂಬ ಅಧಿಕಾರಿ ಲಕ್ಷಾಂತರ ರೂ ಹಣ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೆ. ಅವರ ವಿರುದ್ದ ಯಾವುದೇ ಕ್ರಮ ವಹಿಸದೆ ಬೇರೆಡೆಗೆ ವರ್ಗಾವಣೆ ಮಾಡಿರುವ ಬಗ್ಗೆ ಸಭೆಯ ಗಮನ ಸೆಳೆದು ಬೇಸರ ವ್ಯಕ್ತಪಡಿಸಿದರು.
ಪ್ರಮುಖವಾಗಿ ಚೌಕಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣ ವಿಳಂಭವಾಗುತ್ತಿದ್ದು, ಗುತ್ತಿಗೆದಾರ ನಿಗಧಿತ ಅವಧಿಯಲ್ಲಿ ನಿರ್ಮಾಣ ಮಾಡದ ಪರಿಣಾಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಭೆ ಅಧಿಕಾರಿಗಳಿಗೆ ಪತ್ರ ಬರೆಯಲು ಕೆಡಿಪಿ ಸಭೆ ತೀರ್ಮಾನಿಸಿದೆ ಎಂದರು.
ಕೆಡಿಪಿ ಸಭೆಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲೋಕೇಶ್, ಸದಸ್ಯರುಗಳಾದ ಗೋಪಾಲಗೌಡ, ಹುಲಿಯಪ್ಪ ಬಿ.ಕೆ, ರಾಮಚಂದ್ರ, ಸರೋಜಮ್ಮ, ರಾಧಮ್ಮ, ಅನುಸೂಯಮ್ಮ, ಮಂಜುಳ, ಸುಜಾತ, ಸರೋಜ, ತಿಮ್ಮಯ್ಯ, ಸೋಮಯ್ಯ, ನಾಗರಾಜು, ಲತಾ, ಲಕ್ಷ್ಮಿ, ಶಿಕ್ಷಣ ಇಲಾಖೆ ಸಿಆರ್ಪಿಗಳಾದ ವಿ.ಶಿವಪ್ರಕಾಶ್, ಚಂದನ.ಆರ್, ತೋಟಗಾರಿಕೆ ಇಲಾಖೆ ಅಧಿಕಾರಿ ನಿತಿನ್, ರೇಷ್ಮೆ ಇಲಾಖೆ ವೇಣುಗೋಪಾಲ್ ಅರಣ್ಯ ಇಲಾಖೆ ಯೋಗೇಶ್. ಪಶು ಇಲಾಖೆ ನಾಗರಾಜು ಮತ್ತಿತರರು ಸಭೆಯಲ್ಲಿ ಹಾಜರಿದ್ದರು.