ಬೆಂಗಳೂರು: ಮಾಜಿ ಸಚಿವ ಹಾಲಿ ಬಿಜೆಪಿ ಶಾಸಕ ಕೆ. ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಬಂದಿದೆ.ಈ ವಿಷಯವನ್ನು ವಿಧಾನಸಭೆಯಲ್ಲಿ ಇಂದು ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ ತಮಗೆ ಮಾಜಿ ಮಹಾನಗರ ಪಾಲಿಕೆ ಸದಸ್ಯ ಪದ್ಮರಾಜ್ ಅವರಿಂದ ಕೊಲೆ ಬೆದರಿಕೆ ಬಂದಿರುವುದಾಗಿ ಹೇಳಿದ್ದಾರೆ.
ರಾತ್ರಿ ಕೊಲೆ ಬೆದರಿಕೆ ಬಂದಿರುವುದಾಗಿ ವಿಧಾನಸಭೆಗೆ ವಿವರಿಸಿದ ಗೋಪಾಲಯ್ಯ, ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಕೋರಿದ್ದಾರೆ.ಕೊಲೆ ಬೆದರಿಕೆ ಒಡ್ಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪದ್ಮರಾಜ್ನನ್ನು ಗಡಿಪಾರು ಮಾಡುವಂತೆ ಆಗ್ರಹ ಪಡಿಸಿದ್ದಾರೆ.
ತಮಗೆ ಅಲ್ಲದೆ ಈ ಹಿಂದೆ ಶಾಸಕ ಎಸ್. ಸುರೇಶ್ಕುಮಾರ್ ಅವರಿಗೂ ಸಹ ಪದ್ಮರಾಜ್ ಬೆದರಿಕೆ ಒಡ್ಡಿದ್ದ ಎಂದು ಹೇಳಿದ್ದಾರೆ.
ಗೋಪಾಲಯ್ಯ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸ್ಫೀಕರ್ ಯು.ಟಿ.ಖಾದರ್, ಕೂಡಲೇ ಪದ್ಮರಾಜ್ರನ್ನು ಬಂಧಿಸಬೇಕು. ಇಲ್ಲವಾದರೆ ಠಾಣಾ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.
ರಾತ್ರಿ 11 ಗಂಟೆ 1 ನಿಮಿಷಕ್ಕೆ ಸರಿಯಾಗಿ ಗೋಪಾಲಯ್ಯ ಅವರಿಗೆ ಪದ್ಮರಾಜ್ ಅವರಿಂದ ಕೊಲೆ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು ಬೆಳಿಗ್ಗೆ ವಿಧಾನಸಭಾಧ್ಯಕ್ಷರಿಗೂ ದೂರು ನೀಡಿರುವ ಶಾಸಕ ಗೋಪಾಲಯ್ಯ ತದನಂತರ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ.
ಗೋಪಾಲಯ್ಯ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸರು ಇಂದು ಬೆಳಿಗ್ಗೆ 9.45ಕ್ಕೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪದ್ಮರಾಜ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಅವರ ಮೊಬೈಲ್ನನ್ನು ಸಹ ವಶಪಡಿಸಿಕೊಂಡಿದ್ದಾರೆ.ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರಿನ ಸಂಬಂಧ ಎಫ್ಐಆರ್ ದಾಖಲು ಮಾಡಲಾಗಿದೆ.