ಬೆಂಗಳೂರು: ವಿಶೇಷ ಚೇತನರು ಮಾನವ ಸಂಪನ್ಮೂಲದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು ಸಮಾಜದ ಮುಖ್ಯ ವಾಹಿನಿಯೊಂದಿಗೆ ಸಂಪರ್ಕಿಸುವ ಮೂಲಕ ಅವರನ್ನು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉದ್ದೇಶವಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ದಿವ್ಯ ಕಲಾ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಯವರ ಸಮರ್ಥ ನಾಯಕತ್ವದಲ್ಲಿ, “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಮಂತ್ರವನ್ನು ಅರಿತುಕೊಂಡು, ಗೌರವಾನ್ವಿತ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಕಲಚೇತನರ ಸಬಲೀಕರಣ ಇಲಾಖೆ ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಮತ್ತು ವಿಶೇಷ ಚೇತನರ ಸಬಲೀಕರಣಕ್ಕಾಗಿ ಶ್ಲಾಘನೀಯ ಕೆಲಸ ಎಂದು ಹೇಳಿದರು.
ನಾನು ಭಾರತ ಸರ್ಕಾರದಲ್ಲಿ ಈ ಇಲಾಖೆಯ ಸಚಿವನಾಗಿದ್ದಾಗ. 2014 ರಿಂದ 2021 ರ ನಡುವೆ ಆಗಿನ ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ ಅನೇಕ ಹೊಸ ಯೋಜನೆಗಳ ಮೂಲಕ ಅಂಗವಿಕಲರ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಕೆಲಸ ಮಾಡಲಾಗಿದೆ. ಅಂಗವಿಕಲರ ಹಕ್ಕುಗಳ ಕಾಯಿದೆ 2016 ರ ಮೂಲಕ ಅಂಗವಿಕಲರಿಗೆ ಅನೇಕ ಹಕ್ಕುಗಳನ್ನು ನೀಡಲಾಗಿದೆ. ಕಾಯಿದೆಯಲ್ಲಿ, ಹಿಂದೆ ಪ್ರಚಲಿತದಲ್ಲಿದ್ದ 7 ವಿಧದ ಅಂಗವೈಕಲ್ಯಗಳ ಜಾಗದಲ್ಲಿ 21 ವಿಧದ ಅಂಗವೈಕಲ್ಯಗಳನ್ನು ಸೇರಿಸಲಾಗಿದೆ.
ಭಾರತ ಸರ್ಕಾರದ ವಿಕಲಚೇತನರ ಸಬಲೀಕರಣ ಇಲಾಖೆಯ ಅಡಿಪ್ ಯೋಜನೆಯಡಿ, ದೃಷ್ಟಿ ವಿಕಲಚೇತನರಿಗೆ ಮೋಟಾರೀಕೃತ ಟ್ರೈಸಿಕಲ್, ಶ್ರವಣ ಸಾಧನಗಳು, ಸ್ಮಾರ್ಟ್ ಫೋನ್, ಲ್ಯಾಪ್ಟಾಪ್, ಡಿಜಿಪ್ಲೇಯರ್ ಮತ್ತು ವಾಕಿಂಗ್ ಸ್ಟಿಕ್ ಮುಂತಾದ ಸಹಾಯಕ ಸಾಧನಗಳನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಕಲಚೇತನರು ವಿವಿಧ ಕ್ರೀಡಾ ಚಟುವಟಿಕೆ ಗಳಲ್ಲಿ ಭಾಗವಹಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. 171.00 ಕೋಟಿ ವೆಚ್ಚದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ವಿಶ್ವ ದರ್ಜೆಯ ಅಂಗವಿಕಲರ ಕ್ರೀಡಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮಾನಸಿಕ ವಿಕಲಚೇತನರ ಪುನರ್ವಸತಿಗಾಗಿ ಮಧ್ಯಪ್ರದೇಶದ ಸೆಹೋರ್ನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಅಂಗವಿಕಲರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಈ ಮೇಳಗಳು ವಿಶೇಷ ಚೇತನರ ಉತ್ಪನ್ನಗಳಬ್ರ್ಯಾಂಡಿಂಗ್, ಉತ್ಪನ್ನ ಅಭಿವೃದ್ಧಿ ಮತ್ತು ಅವರಿಗೆಮಾರುಕಟ್ಟೆ ಪ್ರಯೋಜನಗಳನ್ನು ಒದಗಿಸುವಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿವೆ. ಈ ಮೇಳಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಮೇಳಗಳಲ್ಲಿ ಭಾಗವಹಿಸಿ, ವಿಶೇಷ ಚೇತನರನ್ನು ಪ್ರೋತ್ಸಾಹಿ ಸಬೇಕು ಎಂದು ತಿಳಿಸಿದರು.
“ದಿವ್ಯ ಕಲಾ ಮೇಳ” ದಲ್ಲಿ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 100 ಕ್ಕೂ ಹೆಚ್ಚುದಿವ್ಯಾಂಗ ಕುಶಲಕರ್ಮಿಗಳು, ಕಲಾವಿದರು, ಉದ್ಯಮಿಗಳು ತಮ್ಮ ಕೌಶಲ್ಯ, ಕಲೆ ಮತ್ತು ಉದ್ಯಮಶೀಲತೆಯನ್ನು ಪ್ರದರ್ಶಿಸಿದ್ದಾರೆ. ಕಳೆದ 10 ದಿನಗಳಿಂದ ನಡೆಯುತ್ತಿರುವ ಈ ಮೇಳದಲ್ಲಿ 50 ಲಕ್ಷ ರೂ.ಗೂ ಅಧಿಕ ಮೌಲ್ಯದ ಮಾರಾಟ ನಡೆದಿದೆ.
ಇದರಿಂದ ವಿಕಲಚೇತನರ ಆರ್ಥಿಕ ಸ್ಥಿತಿ ಹಾಗೂ ಆತ್ಮಸ್ಥೈರ್ಯ ಹೆಚ್ಚಿದೆ. ಕರ್ನಾಟಕ ಹಾಗೂ ಬೆಂಗಳೂರಿನ ಜನತೆಯ ಉತ್ತಮ ಸಹಕಾರ ನೀಡಿದ್ದು, ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಹಾಗೂ ಈ ದಿವ್ಯಾ ಕಲಾ ಮೇಳವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಕಲಾವಿದರು, ಕುಶಲಕರ್ಮಿಗಳು, ಅಂಗವಿಕಲ ಉದ್ಯಮಿಗಳು, ಎನ್ಜಿಒಗಳು, ಮಾಧ್ಯಮಗಳು ಮತ್ತು ಸಾರ್ವಜನಿಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದರು.
ಕಾರ್ಯಕ್ರಮದಲ್ಲಿ ಎನ್ ಡಿ ಎಫ್ ಡಿಸಿ ಯ ಸಿಎಂಡಿ ನವೀನ್ ಶಾ, ಆಯುಕ್ತರಾದ ದಾಸ್ ಸೂರ್ಯವಂಶಿ, ಕರ್ನಾಟಕ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಶ್ರೀ ಸಿದ್ಧೇಶ್ವರ ಎನ್, ಎನ್ಡಿಎಫ್ಡಿಸಿ ಫೌಂಡೇಶನ್ ನ ಟ್ರಸ್ಟಿ ಡಾ. ಪಂಕಜ್ ಮಾರು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.