ಬೆಂಗಳೂರು: ಕಳೆದ ವರ್ಷ ಐಪಿಎಲ್ ಗೆದ್ದ ಬಳಿಕ ನಡೆದ ವಿಜಯೋತ್ಸವದ ವೇಳೆ ಉಂಟಾಗಿದ್ದ ಕಾಲ್ತುಳಿತ ದುರಂತದಿAದಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲೆ ಕವಿದಿದ್ದ ನಿರ್ಬಂಧದ ಕಾರ್ಮೋಡ ಕೊನೆಗೂ ತೆರವುಗೊಂಡಿದೆ. ಇದೀಗ ರಾಜ್ಯ ಸರ್ಕಾರವು ನಗರದ ಹೆಮ್ಮೆಯ ಕ್ರೀಡಾಂಗಣದಲ್ಲಿ ೨೦೨೬ರ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರುಗೆ ಔಪಚಾರಿಕ ಅನುಮೋದನೆ ನೀಡಿದೆ.
ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ನ ೧೯ನೇ ಸೀಸನ್ ಗೆ ಮಾರ್ಚ್ ೨೮ರ ಶನಿವಾರದಂದು ಚಾಲನೆ ಸಿಗಲಿದೆ. ಬಿಸಿಸಿಐ ಸೀಸನ್ ನ ಮೊದಲ ಹಂತದ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಚಿನ್ನಸ್ವಾಮಿ ಕ್ರೀಡಾಂದಲ್ಲಿ ನಡೆಯಲಿರುವ ಪಂದ್ಯಗಳನ್ನು ಉಲ್ಲೇಖಿಸಿದೆ. ಆದರೆ ರಾಜ್ಯ ಸರ್ಕಾರದಿಂದ ಸಿಗಬೇಕಾಗಿದ್ದ ಅನುಮತಿ ಅಧಿಕೃತವಾಗಿ ದೊರಕಿರಲಿಲ್ಲ.
ಇದೀಗ ರಾಜ್ಯ ಸರಕಾರ ರಚಿಸಿದ ತಜ್ಞರ ಸಮಿತಿ ಮತ್ತು ಕೆಎಸ್ಸಿಎ, ಆರ್ಸಿಬಿ ಮತ್ತು ಟೂರ್ನಿಯ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್ಎ ಪ್ರತಿನಿಧಿಗಳೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ ೧೬ರ ಸೋಮವಾರ ನಡೆದ ಸಭೆಯ ಬಳಿಕ ಔಪಚಾರಿಕ ಅನುಮೋದನೆ ನೀಡಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆ ಬಗ್ಗೆ ಉಂಟಾಗಿದ್ದ ಎಲ್ಲಾ ಗೊಂದಲಗಳು ಬಗೆಹರಿದಂತಾಗಿದೆ.
ಈ ಬಗ್ಗೆ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಎಸ್ ಸಿಎ ವರ್ಕಾರ ವಿನಯ್ ಮೃತ್ಯುಂಜಯ ಅವರು, “ತಜ್ಞರ ಸಮಿತಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಂಡ ಸಿದ್ಧತೆ ಮತ್ತು ಅನುಸರಣೆ ಕ್ರಮಗಳನ್ನು ವಿವರಿಸುವ ವರದಿಯನ್ನು ಮಂಡಿಸಿತು. ಇದರ ಆಧಾರದ ಮೇಲೆ ಮತ್ತು ವ್ಯವಸ್ಥೆಗಳನ್ನು ವಿವರವಾಗಿ ಪರಿಶೀಲಿಸಿದ ನಂತರ, ಗೃಹ ಸಚಿವ ಡಾ ಪರಮೇಶ್ವರ ಅವರು ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಸಮ್ಮತಿ ಸೂಚಿಸಿದರು” ಎಂದು ಮಾಹಿತಿ ನೀಡಿದರು.
೨೮ರಂದು ಉದ್ಘಾಟನಾ ಸಮಾರಂಭ
ಐಪಿಎಲ್ ನ ನಿಗದಿತ ವೇಳಾಪಟ್ಟಿಯಂತೆ ಮಾರ್ಚ್ ೨೮ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದನ್ನೂ ಸೇರಿ ತವರಿನ ೫ ಪಂದ್ಯಗಳನ್ನು ಆರ್ ಸಿಬಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಇನ್ನುಳಿದ ೨ ಪಂದ್ಯಗಳನ್ನು ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಆಡಲಿದೆ. ಇನ್ನು ಪ್ರತಿವರ್ಷದಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅನ್ಬಾಕ್ಸಿಂಗ್ ಕಾರ್ಯಕ್ರಮ ನಡೆಯಲಿದೆ.
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಹಸಿರು ನಿಶಾನೆ



