ಬೆಂಗಳೂರು: ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ `ಗ್ಯಾರಂಟಿ’ ಯೋಜನೆಗಳು ಮಾದರಿಯಾಗಿವೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಬಣ್ಣಿಸಿದ್ದಾರೆ.ಇಂದು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು ರಾಜ್ಯ ಸರ್ಕಾರದ ಕಾರ್ಯ ಯೋಜನೆಗಳ ಬಗ್ಗೆ ವಿಸ್ತøತವಾಗಿ ವಿವರಿಸಿದ್ದಾರೆ.
ಸರ್ಕಾರವು ನಡೆ ನುಡಿಗಳಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕ ಮಾದರಿಯನ್ನು ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಅನುಸರಿಸುತ್ತಾ ಬಂದಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಡವರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ ಎಂದು ಹೇಳಿದ್ದಾರೆ.
ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ತೃಪ್ತಿ ನೀಡಿವೆ ಎಂದ ಅವರು, ಆರ್ಥಿಕ ಅಸಮಾನತೆಯಿಂದ ಅಶಕ್ತರಾಗಿರುವ ಜನತೆಯ ಬದುಕಿಗೆ ಕೇವಲ ಈ ಗ್ಯಾರಂಟಿಗಳು ಮಾತ್ರ ಸಾಕಾಗುವುದಿಲ್ಲ ಎನ್ನುವ ಅರಿವು ಸರ್ಕಾರಕ್ಕೆ ಇದೆ.
ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಎರಡು ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ. ಸರ್ಕಾರದ ಒಂದು ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ಬಂದಿರುವುದು ಜಾಗತಿಕ ದಾಖಲೆಯಾಗಿದೆ ಎಂದು ರಾಜ್ಯಪಾಲರು ಹೇಳಿದರು.
ನನ್ನ ಸರ್ಕಾರ ಭವಿಷ್ಯದತ್ತ ದೃಷ್ಟಿ ನೆಟ್ಟಿರುವ ಸರ್ಕಾರ. ಈ ಎಂಟು ತಿಂಗಳಲ್ಲಿ 77,000 ಕೋಟಿಗೂ ಹೆಚ್ಚು ಬಂಡವಾಳವು ರಾಜ್ಯಕ್ಕೆ ಹರಿದು ಬಂದಿದೆ. ಜನವರಿ ತಿಂಗಳ ಅಂತ್ಯದವರೆಗೆ ನಮ್ಮ ರಾಜ್ಯದ ಜಿಎಸ್ಟಿ ಸಂಗ್ರಹಣೆಯ ಬೆಳವಣಿಗೆ ದರವು ಇಡೀ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಲು ಖುಷಿಪಡುತ್ತೇನೆ. ಬರಗಾಲವಿದ್ದರೂ ರಸ್ತೆ, ನೀರು, ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ರಾಜ್ಯವು ದಾಖಲಾರ್ಹ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ ಎಂದು ರಾಜ್ಯಪಾಲರು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಬಜೆಟ್ನಲ್ಲಿ ಘೋಷಿಸಿದ ಒಟ್ಟು ಘೋಷಣೆಗಳಲ್ಲಿ ಶೇಕಡ 97 ರಷ್ಟು ಘೋಷಣೆಗಳಿಗೆ ಅಧಿಸೂಚನೆ ಹೊರಡಿಸಿ ಕಾರ್ಯಗತಗೊಳಿಸಲಾಗುತ್ತಿರುವುದು ದಾಖಲೆಯ ಸಂಗತಿ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲಗಳು ಸಿಗುತ್ತಿಲ್ಲ.
ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ತೆರಿಗೆಯ ಪಾಲು ಪಡೆಯುವ ವಿಚಾರದಲ್ಲಿ 10ನೇ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ನಮಗೆ ನ್ಯಾಯ ಮತ್ತು ನ್ಯಾಯಯುತವಾಗಿ ಸಿಗಬೇಕಾದ ಪಾಲನ್ನು ಪಡೆಯಲು ನನ್ನ ಸರ್ಕಾರವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಹೊಸ ಸರ್ಕಾರ ರಚನೆಯಾದ ನಂತರ ಕಂದಾಯ ಇಲಾಖೆಯ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಗಳಲ್ಲಿ ಒಟ್ಟು 93,350 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ 2024 ರ ಫೆಬ್ರವರಿ 5 ರ ವರೆಗೆ 84,253 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. 5787 ಪ್ರಕರಣಗಳು ಬಾಕಿ ಉಳಿದಿವೆ ಎಂದು ಅವರು ತಿಳಿಸಿದರು.
ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅವುಗಳಲ್ಲಿ 196 ತಡಲೂಕುಗಳನ್ನ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕಾರ್ಯಕ್ರಮಗಳನ್ನು ಕೈಗೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಗೆಹ್ಲೋಟ್ ಮಾಹಿತಿ ನೀಡಿದರು.
ಜನರ ಅನುಕೂಲಕ್ಕಾಗಿ ನಾಮಫಲಕಗಳ ಶೇಕಡ 60ರಷ್ಟು ಭಾಗವು ಕನ್ನಡದಲ್ಲಿ ಇರಬೇಕೆಂದು ತೀರ್ಮಾನಿಸಿ ಕಾನೂನು ರೂಪಿಸಿ ಅನುಷ್ಠಾನ ಮಾಡಲು ಕ್ರಮವಹಿಸಿದ್ದೇವೆ. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಕಾಯ್ದೆಯನ್ನು ರೂಪಿಸಲಾಗಿದೆ. ಸದ್ಯದಲ್ಲೇ ಅದು ಅನುಷ್ಠಾನಕ್ಕೆ ಬರಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಟನಲ್ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಟನಲ್ ನಿರ್ಮಾಣದ ಕುರಿತು ಸಾಧಕ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಭಾಷಣದಲ್ಲಿ ತಿಳಿಸಿದ್ದಾರೆ.