ಪಾಟ್ಲಿ: ಸಂಘಟಿತ ಆಟದ ಪ್ರದರ್ಶನ ನೀಡಿದ ಗುಜರಾತ್ ಜೈಂಟ್ಸ್ 44-35 ಅಂಕಗಳಿಂದ ಯು ಮುಂಬಾ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ 10ನೇ ಆವೃತ್ತಿಯ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿತು.ಪಾಟ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡದ ಎರಡನೇ ಪಂದ್ಯದಲ್ಲಿ ಗುಜರಾತ್ ಸ್ಥಿರ ಆಟದ ಪ್ರದರ್ಶನ ನೀಡಿ ಪೂರ್ಣ ಅಂಕ ಕಲೆ ಹಾಕಿತು.
ಈ ಗೆಲುವಿನ ಮೂಲಕ ಗುಜರಾತ್ ಪ್ರಸಕ್ತ ಟೂರ್ನಿಯಲ್ಲಿ ಆರನೇ ಗೆಲುವನ್ನು ದಾಖಲಿಸಿದ್ದು 49 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಇನ್ನು ಮುಂಬಾ ಆಡಿದ 15 ಪಂದ್ಯಗಳಲ್ಲಿ 6 ಗೆಲುವು, 7 ಸೋಲು ಕಂಡಿದ್ದು, 40 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಪಾಟ್ನಾಗೆ ಜಯ: ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ 44-28 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಪಾಟ್ನಾ ಟೂರ್ನಿಯಲ್ಲಿ ತನ್ನ ಗೆಲುವಿನ ಸಂಖ್ಯೆಯನ್ನು ಏಳಕ್ಕೆ ಏರಿಸಿಕೊಂಡಿತು. ಬೆಂಗಾಲ್ ವಾರಿಯರ್ಸ್ ತಂಡ ಟೂರ್ನಿಯಲ್ಲಿ ಏಳನೇ ಸೋಲನ್ನು ಕಂಡಿತು.
ಪಾಟ್ನಾ ಪರ ಸಚಿನ್ ಹಾಗೂ ಮಂಜೀತ್ ಅಮೋಘ ಆಟದ ಪ್ರದರ್ಶನವನ್ನು ನೀಡಿ ಗೆಲುವಿನಲ್ಲಿ ಮಿಂಚಿದರು. ಪರಾಜಿತ ತಂಡದ ಪರ ನಿತೀನ್ ಕುಮಾರ್ 10 ಅಂಕವನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.