ಟೊರಾಂಟೊ: ಗ್ರ್ಯಾಂಡ್ಮಾಸ್ಟರ್ ಡಿ.ಗುಕೇಶ್ ಅವರು ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ 11ನೇ ಸುತ್ತಿನಲ್ಲಿ, ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಜೊತೆ ‘ಡ್ರಾ’ ಸಾಧಿಸಿ ಗಮನ ಸೆಳೆದರು.
ಆದರೆ ಅವರು ಜಂಟಿ ಎರಡನೇ ಸ್ಥಾನಕ್ಕೆ ಸರಿದರು. ಭಾರತದ ಇನ್ನಿಬ್ಬರು ಗ್ರ್ಯಾಂಡ್ಮಾಸ್ಟರ್ಗಳಾದ ಆರ್. ಪ್ರಜ್ಞಾನಂದ ಮತ್ತು ವಿದಿತ್ ಗುಜರಾತಿ ಅವರು ಬುಧವಾರ ನಿರಾಸೆ ಅನುಭವಿಸಿದರು.
ಇಲ್ಲಿನ ‘ಗ್ರೇಟ್ ಹಾಲ್’ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅಮೆರಿಕದ ಅನುಭವಿ ಆಟಗಾರ ಹಿಕಾರು ನಕಾಮುರಾ ಅವರು ಪ್ರಜ್ಞಾನಂದ ಅವರನ್ನು ಸೋಲಿಸಿದರೆ, ಕಳೆದ ಬಾರಿಯ ಚಾಂಪಿಯನ್ ಇಯಾನ್ ನೆಪೊಮ್ನಿಯಾಚಿ ಅವರು ವಿದಿತ್ ಎದುರು ಗೆಲುವು ಪಡೆದು ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ನ ಆಟಗಾರ ಅಲಿರೇಝಾ ಫಿರೋಜ್ ಅವರಿಗೆ ಅಜರ್ಬೈಜಾನ್ನ ನಿಜತ್ ಅಬಸೋವ್ ವಿರುದ್ಧ ಗೆಲುವು ದೊರೆಯಿತು. ಅಬಸೋವ್ ಇಲ್ಲಿ ಪಾಲ್ಗೊಂಡಿರುವ ಅತಿ ಕಡಿಮೆ (114ನೇ) ಕ್ರಮಾಂಕದ ಆಟಗಾರ ಎನಿಸಿದ್ದಾರೆ.