ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿಬಿಜೆಪಿಯ ಲಕ್ಷ್ಮಣ ಸವದಿಯವರು ತಮಗೆ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ದೊರೆಯದಿದ್ದರೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ.ಬೆಳಗಾವಿ ಜಿಲ್ಲೆಯ ಪ್ರಭಾವಿ ಮುಖಂಡನೆಂದು ಹೇಳಲಾಗಿರುವ ಲಕ್ಷ್ಮಣ ಸವದಿ ತಾವು ಸ್ಪರ್ಧಿಸುತ್ತಿದ್ದ ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀವ್ರ ಪ್ರಯತ್ನ ಪಡುತ್ತಿದ್ದಾರೆ.
ಅವರಿಗೆ ಟಿಕೆಟ್ ತಪ್ಪಿಸಿ ತಮ್ಮೊಂದಿಗೆ ಬಿಜೆಪಿಗೆ ಬಂದ ಮಹೇಶ್‍ಕುಮಟಹಳ್ಳಿ ಅವರಿಗೆ ಟಿಕೆಟ್ ಕೊಡಿಸಲು ಗೋಕಾಕ್ ಕ್ಷೇತ್ರದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹ ಪ್ರಬಲವಾಗಿ ಯತ್ನ ನಡೆಸಿದ್ದಾರೆ. ಕುಮಟಹಳ್ಳಿಯವರಿಗೆ ಟಿಕೆಟ್ ನೀಡಲೇ ಬೇಕು ಎಂದು ಪಟ್ಟುಹಿಡಿದಿರುವ ರಮೇಶ್‍ಜಾರಕಿಹೊಳಿ ಒಂದು ವೇಳೆ ವರಿಷ್ಠರು ಕುಮಟಹಳ್ಳಿಗೆ ಟಿಕೆಟ್ ನೀಡದಿದ್ದರೆ ತಾವು ಸಹ ಗೋಕಾಕ್‍ನಿಂದಸ್ಪರ್ಧೆಗೆ ಇಳಿಯುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ಪ್ರಮುಖರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಶತಾಯಗತಾಯ ಬಿಜೆಪಿ ಟಿಕೆಟ್ ಗಿಟ್ಟಿಸಲು ಯತ್ನ ನಡೆಸಿರುವ ಲಕ್ಷ್ಮಣ ಸವದಿ ಒಂದು ವೇಳೆ ಟಿಕೆಟ್ ವಂಚಿತರಾದರೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.ಈಗಾಗಲೇ ಮೂಲಗಳ ಪ್ರಕಾರ ಲಕ್ಷ್ಮಣ ಸವದಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ತಮ್ಮ ಆಪ್ತರ ಮುಖಾಂತರ ಒಂದು ಸುತ್ತಿನ ಮಾತುಕತೆಯನ್ನು ಕಾಂಗ್ರೆಸ್ ಪ್ರಮುಖರೊಂದಿಗೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ದೊರೆಯದ ನಾಗರಾಜ್ ಚಬ್ಬಿ ಅವರನ್ನು ಬಿಜೆಪಿ ತನ್ನತ್ತ ಸೆಳೆದಿರುವ ಹಿನ್ನೆಲೆಯಲ್ಲಿ ಒಂದು ವೇಳೆ ಲಕ್ಷ್ಮಣ ಸವದಿಗೆ ಟಿಕೆಟ್ ನೀಡದಿದ್ದರೆ ತನ್ನತ್ತ ಸೆಳೆಯಲು ಕಾಂಗ್ರೆಸ್ ಮುಖಂಡರು ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಮೂರು ಪಕ್ಷಗಳ ಅಂತಿಮ ಪಟ್ಟಿ ಬಿಡುಗಡೆಯಾಗುವ ವೇಳೆಗೆ ಟಿಕೆಟ್ ವಂಚಿತರು ಯಾರೂ ಯಾವ ಪಕ್ಷ ಸೇರುತ್ತಾರೆ ಎಂಬುದು ಸಹ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
Leave a Review