ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ನಡೆದ ಹನುಮಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದೆ.ಕೆರಗೋಡಿನಿಂದ ಬಿಜೆಪಿ ಕಾರ್ಯಕರ್ತರು ಮಂಡ್ಯದವರೆಗೆ ಪಾದಯಾತ್ರೆ ನಡೆಸಿದ್ದಾರೆ.
ಮಂಡ್ಯದವರೆಗೆ ಪಾದಯಾತ್ರೆ ನಡೆಸಲಿರುವ ಪ್ರತಿಭಟನಾಕಾರರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸಲು ಮುಂದಾಗಿದ್ದಾರೆ.ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ನಾವು ಕಾಂಗ್ರೆಸ್ನವರಿಂದ ದೇಶಪ್ರೇಮದ ಪಾಠ ಕಲಿಯಬೇಕಾಗಿಲ್ಲ.
ಗುಂಡೇಟಿಗೆ ನಾವು ಹೆದರಲಿಲ್ಲ. ಲಾಠಿಗೆ ಹೆದರುತ್ತೇವೆಯೇ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಸರ್ಕಾರದಿಂದ ಏನು ಧ್ವಜಸ್ತಂಭ ಹಾಕಿಲ್ಲ. ನಾವು ದೇಣಿಗೆ ಸಂಗ್ರಹಿಸಿ ಧ್ವಜಸ್ತಂಭಹಾಕಿದ್ದೇವೆ. ಇದನ್ನು ವಿರೋಧಿಸಲು ಇವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಂದೆಡೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಪ್ರತಿಭಟನಾ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಕರೆದೊಯ್ದರು. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಬರಬೇಕಿತ್ತಾದರೂ ಅಶೋಕ್ ಬರುವ ಮುನ್ನವೇ ಪ್ರತಿಭಟನೆ ಅಂತ್ಯಕಂಡಿತ್ತು.